Site icon Vistara News

WPL 2024: ಡೆಲ್ಲಿ ಪರಾಕ್ರಮಕ್ಕೆ ತಲೆಬಾಗಿದ ಗುಜರಾತ್​; ಸತತ 4ನೇ ಸೋಲು

Gujarat Giants vs Delhi Capitals Women

ಬೆಂಗಳೂರು: ಈ ಬಾರಿಯ ಡಬ್ಲ್ಯುಪಿಎಲ್(WPL 2024)​ ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್(Gujarat Giants)​ ತಂಡ ಸೋಲಿನ ಸುಳಿಯಿಂದ ಹೊರಬರುವ ಲಕ್ಷಣ ತೋರುತ್ತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧ 25 ರನ್​ ಅಂತರದಿಂದ ಪರಾಭವಗೊಂಡು ಸತತ 4ನೇ ಸೋಲಿಗೆ ತುತ್ತಾಗಿದೆ. ಗೆಲುವು ಕಂಡ ಡೆಲ್ಲಿ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ಸಂಘಟಿತ ಬ್ಯಾಟಿಂಗ್ ನಡೆಸಿ​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 163 ರನ್​ ಬಾರಿಸಿತು. ಜವಾಬಿತ್ತ ಗುಜರಾತ್ ಜೈಂಟ್ಸ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು ಕೇವಲ 138 ರನ್​ ಮಾತ್ರ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

​ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಪರ ಅಗ್ರ ಕ್ರಮಾಂಕದ ಮೂವರು ಬಿರುಸಿನ ಬ್ಯಾಟಿಂಗ್​ ಮೂಲಕ ರನ್​ ರಾಶಿ ಹಾಕಿದರು. ಇವರು ಒಟ್ಟುಗೂಡಿಸಿದ ಮೊತ್ತವನ್ನು ಗಮನಿಸುವಾಗ ಡೆಲ್ಲಿ 200ರ ಗಡಿ ದಾಟಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಈ ನಿರೀಕ್ಷೆ ಮತ್ತು ಕುತೂಹಲ ಹೆಚ್ಚು ಹೊತ್ತು ಇರಲಿಲ್ಲ. ಈ ಮೂವರ ವಿಕೆಟ್​ ಪತನದ ಬಳಿಕ ಕ್ರೀಸ್​ಗಿಳಿದ ಬ್ಯಾಟರ್​ಗಳು ಆಕ್ರಮಣಕಾರಿ ಆಟವನ್ನಾಡಲು ಮುಂದಾಗಿ ಬಡಬಡನೆ ವಿಕೆಟ್​ ಕಳೆದುಕೊಂಡರು.

ಆರಂಭಿಕ ಹಂತದಲ್ಲಿ ಬೌಲಿಂಗ್​ ಹಿಡಿತ ಕಳೆದುಕೊಂಡಿದ್ದ ಗುಜರಾತ್​ ತಂಡದ ಬೌಲರ್​ಗಳು, ಡೆಲ್ಲಿ ನಾಯಕಿ ಮೆಗ್​ ಲ್ಯಾನಿಂಗ್​ ಮತ್ತು ಆಲಿಸ್ ಕ್ಯಾಪ್ಸಿ ವಿಕೆಟ್​ ಪತನದ ಬಳಿಕ ಸಂಪೂರ್ಣ ಹಿಡಿತ ಸಾಧಿಸಿದರು. ದೊಡ್ಡ ಹೊಡೆತಗಳಿಗೆ ಅವಕಾಶ ನೀಡಲಿಲ್ಲ. ಮೆಗ್​ ಲ್ಯಾನಿಂಗ್​ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 55 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಕ್ಯಾಪ್ಸಿ ಕೇವಲ 17 ಎಸೆತಗಳಿಂದ 27 ರನ್​ ಚಚ್ಚಿದರು. ಶಫಾಲಿ ವರ್ಮ ಕೊಡುಗೆ 17 ರನ್​. ಅಗ್ರ ಮೂವರ ವಿಕೆಟ್​ ಕೂಡ ಮೇಘನಾ ಸಿಂಗ್ ಪಾಲಾಯಿತು. 4 ಓವರ್​ ಎಸೆದ ಅವರು ಒಟ್ಟು 37 ರನ್​ ವೆಚ್ಚದಲ್ಲಿ 4 ವಿಕೆಟ್​ ಉರುಳಿಸಿದರು.

ಮತ್ತೆ ವೈಫಲ್ಯ ಕಂಡ ವೇದಾ


ಚೇಸಿಂಗ್​ ನಡೆಸಿದ ಗುಜರಾತ್ ತಂಡಕ್ಕೆ ಅನುಭವಿ ಶಿಖಾ ಪಾಂಡೆ ಮತ್ತು ಜೆಸ್ ಜೊನಾಸೆನ್ ಸೇರಿಕೊಂಡು ಆರಂಭಿಕ ಆಘಾತವಿಕ್ಕಿದರು. ನಾಯಕಿ ಬೆತ್​ ಮೂನಿ(12), ಲಾರಾ ವೊಲ್ವಾರ್ಡ್ಟ್(0) ಮತ್ತು ಫೋಬೆ ಲಿಚ್ಫೀಲ್ಡ್(15) ವಿಕೆಟ್​ ಕಿತ್ತರು. ತಂಡದ ಮೊತ್ತ 40ರ ಗಡಿ ದಾಡುವ ಮುನ್ನವೇ ಪ್ರಮುಖ 3 ವಿಕೆಟ್​ ಕಳೆದುಕೊಂಡ ಗುಜರಾತ್​ ಸಂಕಷ್ಟಕ್ಕೆ ಸಿಕಲುಕಿತು. ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರು ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ​ ಕಂಡರು. ಕಳೆದ 2 ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿದ್ದರ ಅವರು ಈ ಪಂದ್ಯದಲ್ಲಿ ಎರಡಂಕಿ ಮೊತ್ತ ದಾಖಲಿಸಿದರು. 2 ಬೌಂಡಿ ಬಾರಿಸಿ 12 ರನ್​ಗೆ ವಿಕೆಟ್​ ಕೈಚೆಲ್ಲಿದರು. ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗುವುದು ಅನುಮಾನ.

ಇದನ್ನೂ ಓದಿ WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

ಆಶ್ಲೀಗ್ ಗಾರ್ಡನರ್ ಅವರು ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿ 5 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿ 40 ರನ್​ ಬಾರಿಸಿದರು. ಇವರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಉಳಿದ ಎಲ್ಲ ​ಬ್ಯಾಟರ್​ಗಳು ಘೋರ ಬ್ಯಾಟಿಂಗ್​ ವೈಫಲ್ಯ ಕಂಡರು. ಡೆಲ್ಲಿ ಪರ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿದ ರಾಧಾ ಯಾದವ್​ ಮತ್ತು ಜೆಸ್ ಜೊನಾಸೆನ್ ತಲಾ ಮೂರು ವಿಕೆಟ್​ ಕಿತ್ತು ಮಿಂಚಿದರು. ರಾಧಾ 20 ರನ್​ ವೆಚ್ಚದಲ್ಲಿ ಈ ಸಾಧನೆ ತೋರಿದರೆ, ಜೊನಾಸೆನ್ 23 ರನ್​ ಬಿಟ್ಟುಕೊಟ್ಟರು.

Exit mobile version