Site icon Vistara News

WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

Nat Sciver-Brunt celebrates the dismissal of S Meghana

ಬೆಂಗಳೂರು: ಯುಪಿ ವಾರಿಯರ್ಸ್​ ಎದುರಿನ ಕಳೆದ ಪಂದ್ಯದಲ್ಲಿ(WPL 2024) ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​(Mumbai Indian)​ ತಂಡ ಮತ್ತೆ ಗೆಲುವಿನ ಹಳೆ ಏರಿದೆ. ಆರ್​ಸಿಬಿ(Royal Challengers Bangalore) ವಿರುದ್ಧದ ಶನಿವಾರದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ 7 ವಿಕೆಟ್​ಗಳ ಜಯ ಸಾಧಿಸಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ ಮೇಲೇರಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಆರ್​ಸಿಬಿಯನ್ನು ​ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ನಿಗದಿತ 20 ಓವರ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ 6 ವಿಕೆಟ್​ಗೆ 131 ರನ್​ ಮಾತ್ರ ಕಲೆ ಹಾಕಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ 15.1 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆರ್​ಸಿಬಿಗೆ ತವರಿನಲ್ಲಿ ಎದುರಾದ ಸತತ 2ನೇ ಸೋಲು ಇದಾಗಿದೆ. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕರಾದ ಯಾಸ್ತಿಕಾ ಭಾಟಿಯಾ(31) ಮತ್ತು ಹೀಲಿ ಮ್ಯಾಥ್ಯೂಸ್​(26) ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆ ಬಳಿಕ ಬಂದ ಹಂಗಾಮಿ ನಾಯಕಿ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಬೌಲಿಂಗ್​ ಜತೆಗೆ ಬ್ಯಾಟಿಂಗ್​ನಲ್ಲಿಯೂ ಜವಾಬ್ದಾರಿಯುತ ಆಟವಾಡಿ 4 ಬೌಂಡರಿ ನೆರವಿನಿಂದ 27 ರನ್​ ಬಾರಿಸಿದರು. ಬೌಲಿಂಗ್​ನಲ್ಲಿ 2 ವಿಕೆಟ್ ಕೂಡ ಕಿತ್ತರು. ಮುಂಬೈ ಪರ ಬ್ಯಾಟಿಂಗ್​ನಲ್ಲಿ ಹೆಚ್ಚು ಗಮನ ಸೆಳೆದವರೆಂದರೆ ಅಮೆಲಿಯಾ ಕೆರ್. 24 ಎಸೆತ ಎದುರಿಸಿದ ಕೆರ್​ 7 ಬೌಂಡರಿಯೊಂದಿಗೆ ಅಜೇಯ 40 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆರ್​ಸಿಬಿಯ ಪ್ರಮುಖ ಬೌಲರ್​ ರೇಣುಕಾ ಸಿಂಗ್​ ಠಾಕೂರ್​ ಅವರು ಈ ಪಂದ್ಯದಲ್ಲಿ ವಿಕೆಟ್​ ಲೆಸ್​ ಆಗುವ ಜತೆಗೆ ದುಬಾರಿಯಾಗಿಯೂ ಕಂಡುಬಂದರು. 2 ಓವರ್​ನಿಂದ ಬರೋಬ್ಬರಿ 25 ರನ್​ ಬಿಟ್ಟುಕೊಟ್ಟರು. ಕನ್ನಡತಿ ಶ್ರೇಯಾಂಕ ಪಾಟೀಲ್ 2 ಓವರ್​ಗೆ 15 ರನ್​ ನೀಡಿ 1 ವಿಕೆಟ್​ ಉರುಳಿಸಿದರು.

ಪೆವಿಲಿಯನ್​ ಪರೇಡ್​ ನಡೆಸಿದ ಆರ್​ಸಿಬಿ ಆಟಗಾರ್ತಿಯರು


ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ತಂಡದ ಪರ ಅಗ್ರ ಕ್ರಮಾಂಕದ ನಾಲ್ಕು ಬ್ಯಾಟರ್​ಗಳು ಈ ಪಂದ್ಯದಲ್ಲಿ ಪೆವಿಲಿಯನ್​ ಪರೇಡ್​ ನಡೆಸಿದರು. ನಾಯಕಿ ಸ್ಮೃತಿ ಮಂಧಾನ(9), ಸೋಫಿ ಡಿವೈನ್​(9), ಸಬ್ಬಿನೇನಿ ಮೇಘನಾ(11) ಮತ್ತು ರಿಚಾ ಘೋಷ್​(7) ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡರು. ಇನ್ನೇನು ತಂಡ 100 ರನ್​ ಗಳಿಸುವುದು ಕಷ್ಟ ಎನ್ನುವಾಗ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್​ ಪೆರ್ರಿ ಅಜೇಯ 44 ರನ್​ ಬಾರಿಸಿ ತಂಡಕ್ಕೆ ನೆರವಾದರು. ಅವರ ಈ ಬ್ಯಾಟಿಂಗ್​ ಹೋರಾಟದ ಫಲವಾಗಿ ತಂಡ 100ರ ಗಡಿ ದಾಟಿತು. ಮುಂಬೈ ಪರ ಪೂಜಾ ವಸ್ತ್ರಾಕರ್​ 2 ವಿಕೆಟ್​ ಕಿತ್ತರು.

Exit mobile version