Site icon Vistara News

WPL 2024: ಯುಪಿ ವಿರುದ್ಧ ಮುಂಬೈಗೆ ಭರ್ಜರಿ ಜಯ; 3ನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ

Mumbai Indians Women Team

WPL 2024: Mumbai Indians Women Won The Match By 42 Runs Against UP Warriorz

ನವದೆಹಲಿ: ಡಬ್ಲ್ಯೂಪಿಎಲ್‌ ಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ (WPL 2024) ಮುಂಬೈ ಇಂಡಿಯನ್ಸ್‌ ವುಮೆನ್‌ (MI Women) ತಂಡದ ಪ್ರಾಬಲ್ಯ ಮುಂದುವರಿದಿದೆ. ದೆಹಲಿಯಲ್ಲಿರುವ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ (UP Warriorz) ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡವು 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ರನ್‌ರೇಟ್‌ ಆಧಾರದ ಮೇಲೆ ಮುಂಬೈ ಇಂಡಿಯನ್ಸ್‌ ತಂಡವು ಎರಡನೇ ಸ್ಥಾನಕ್ಕೆ ಜಿಗಿದರೆ, ಆರ್‌ಸಿಬಿ ವುಮೆನ್‌ ತಂಡವು ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಹರ್ಮನ್‌ ಪ್ರೀತ್‌ ಕೌರ್‌ ಬಳಗ ನೀಡಿದ 161 ರನ್‌ಗಳ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 118 ರನ್‌ ಗಳಿಸಲಷ್ಟೇ ಶಕ್ತವಾಯಿತು. ಯುಪಿ ವಾರಿಯರ್ಸ್‌ ತಂಡದ ಆಟಗಾರ್ತಿಯರು ರನ್‌ ಗಳಿಸಲು ಪರದಾಡಿದರು. ಆರಂಭದಿಂದಲೂ ವಿಕೆಟ್‌ ಕಳೆದುಕೊಳ್ಳುತ್ತ ಹೋದ ಯುಪಿಡಬ್ಲ್ಯೂ ಕೊನೆಗೆ ಸೋಲೊಪ್ಪಿಕೊಂಡಿತು. ಯುಪಿ ಪರ ದೀಪ್ತಿ ಶರ್ಮಾ 53 ರನ್‌ ಬಾರಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರ್ತಿಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ರನ್‌ ಗಳಿಸಲೇ ಇಲ್ಲ.

ಮುಂಬೈ ಇಂಡಿಯನ್ಸ್‌ ಪರ ಸೈಕಾ ಇಶಾಕ್‌ 27 ರನ್‌ ನೀಡಿ 3 ವಿಕೆಟ್‌ ಕಬಳಿಸಿದರೆ, ನ್ಯಾಟ್‌ ಸ್ಕಿವರ್‌ ಬ್ರಂಟ್‌ 14 ರನ್‌ ನೀಡಿ 2 ವಿಕೆಟ್‌ ಪಡೆದರು. ಉತ್ತರ ಪ್ರದೇಶ ವಾರಿಯರ್ಸ್‌ ತಂಡವು ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿಯೇ ಮುಂದುವರಿದಿದೆ. 6 ಪಂದ್ಯ ಆಡಿರುವ ಯುಪಿ 4 ಪಂದ್ಯಗಳಲ್ಲಿ ಸೋತು, 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಇದನ್ನೂ ಓದಿ: Yashasvi Jaiswal: ಜೈಸ್ವಾಲ್​ ಮುಟ್ಟಿದ್ದೆಲ್ಲ ಚಿನ್ನ; ದಿಗ್ಗಜರ ಹಲವು ದಾಖಲೆಗಳಿಗೆ ಕನ್ನ!

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಹೇಲೆಯ್‌ ಮ್ಯಾಥ್ಯೂಸ್‌ (4) ಹಾಗೂ ಯಸ್ತಿಕಾ ಭಾಟಿಯಾ (9) ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ ನ್ಯಾಟ್‌ ಸ್ಕಿವರ್‌ ಬ್ರಂಟ್‌ (45), ಅಮೆಲಿಯಾ ಕೆರ್‌ (39) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (33) ಅವರ ಸಮಯೋಚಿತ ಆಟದ ಪರಿಣಾಮ ಮುಂಬೈ ಇಂಡಿಯನ್ಸ್‌ ತಂಡವು ಉತ್ತಮ ಮೊತ್ತ ಪೇರಿಸಿತು. ಉತ್ತರ ಪ್ರದೇಶದ ಪರ ಚಮಾರಿ ಅಥಪಟ್ಟು ಅವರು 2 ವಿಕೆಟ್‌ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಇಂಡಿಯನ್ಸ್‌ ವುಮೆನ್‌ 20 ಓವರ್‌ಗಳಲ್ಲಿ 160/6
ನ್ಯಾಟ್‌ ಸ್ಕಿವರ್‌ ಬ್ರಂಟ್‌ (45), ಅಮೆಲಿಯಾ ಕೆರ್‌ (39), ಚಮಾರಿ ಅಥಪಟ್ಟು 27ಕ್ಕೆ 2

ಯುಪಿ ವಾರಿಯರ್ಸ್‌ 20 ಓವರ್‌ಗಳಲ್ಲಿ 118/9
ದೀಪ್ತಿ ಶರ್ಮಾ 53, ಸೈಕಾ ಇಶಾಕ್‌ 27ಕ್ಕೆ 3

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version