Site icon Vistara News

WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

RCB celebrate after DRS ruled the Chamari Athapaththu lbw in their

ಬೆಂಗಳೂರು: ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ತಂಡ(Royal Challengers Bangalore) ಯುಪಿ ವಾರಿಯರ್ಸ್(UP Warriorz) ಎದುರು 23 ರನ್​ಗಳ ಗೆಲುವು ಸಾಧಿಸಿದೆ. ಇದು ಆರ್​ಸಿಬಿಗೆ ತವರಿನ ಕೊನೆಯ ಪಂದ್ಯವಾಗಿತ್ತು. ನಾಳೆಯಿಂದ ಡೆಲ್ಲಿಯಲ್ಲಿ ಪಂದ್ಯವಾಳಿಗಳು ನಡೆಯಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸಂಪೂರ್ಣ ಜೋಶ್​ನಿಂದ ಬ್ಯಾಟಿಂಗ್​ ನಡೆಸುವ ಮೂಲಕ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಒಂದು ಹಂತದವರೆಗೆ ದಿಟ್ಟ ಹೋರಾಟ ನಡೆಸಿ ಆ ಬಳಿಕ ಕುಸಿತ ಕಂಡು ನಿಗದಿತ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 175 ರನ್​ ಗಳಿಸಲಷ್ಟೇ ಶಕ್ತವಾಯಿತು.

ಅಪಾಯಕಾರಿ ಬ್ಯಾಟರ್​ ಗ್ರೇಸ್ ಹ್ಯಾರಿಸ್(5)​ ಮತ್ತು ​ಚಾಮರಿ ಅಟಪಟ್ಟು(8) ಅವರ ವಿಕೆಟ್​ ಬೇಗನೆ ಬಿದ್ದದ್ದು ಯುಪಿ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ರೇಣುಕ ಸಿಂಗ್​ ಓವರ್​ನಲ್ಲಿ ಸತತ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿದ ಕಿರಣ್ ನವಗಿರೆ(18) ಕೂಡ ತಮ್ಮ ಆಕ್ರಮಣಕಾರಿ ಆಟವನ್ನು ಹೆಚ್ಚು ಹೊತ್ತು ಸಾಗಿಸುವಲ್ಲಿ ವಿಫಲರಾದರು. ನಾಯಕಿ ಅಲಿಸ್ಸಾ ಹೀಲಿ (55), ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ದೀಪ್ತಿ ಶರ್ಮ(33) ಮತ್ತು ಪೂನಂ ಖೇಮ್ನಾರ್(31) ರನ್​ ಬಾರಿಸಿದರು.

ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿಗೆ ನಾಯಕಿ ಸ್ಮೃತಿ ಮಂಧಾನ ಮತ್ತು ಸಬ್ಬಿನೇನಿ ಮೇಘನಾ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಶೈಲಿಯಿಂದ ಉತ್ತಮ ಆರಂಭ ಒದಗಿಸಿದರು. ಉಭಯ ಆಟಗಾರ್ತಿರು ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿದ ಪರಿಣಾಮ ಪವರ್​ ಪ್ಲೇಯಲ್ಲಿ 57 ರನ್​ ಒಟ್ಟುಗೂಡಿತು. ಈ ಆವೃತ್ತಿಯಲ್ಲಿ ಆರ್​ಸಿಬಿ ಪವರ್​ ಪ್ಲೇಯಲ್ಲಿ ಗಳಿಸಿದ ಅತ್ಯುತ್ತಮ ಗರಿಷ್ಠ ಮೊತ್ತ ಕೂಡ ಇದಾಗಿದೆ. ಜತೆಗೆ ಆರ್​ಸಿಬಿಯ ಓಪನಿಂಗ್​ ಆಟಗಾರ್ತಿಯ ಬದಲಾವಣೆಯ ಪ್ರಯೋಗ ಕೂಡ ಯಶಸ್ಸು ಕಂಡಿತು. ಈ ಹಿಂದೆ ನ್ಯೂಜಿಲ್ಯಾಂಡ್​ನ ಸೋಫಿ ಡಿವೈನ್​ ಅವರು ಇನಿಂಗ್ಸ್​ ಆರಂಭಿಸುತ್ತಿದ್ದರು. ಆದರೆ ಅವರನ್ನು ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿಸಿ ಮೇಘನಾಗೆ ಆರಂಭಿಕರಾಗಿ ಭಡ್ತಿ ನೀಡಲಾಯಿತು. ಇದರಲ್ಲಿ ತಂಡ ಮತ್ತು ಮೇಘನಾ ಯಶಸ್ಸು ಕಂಡರು. 28 ರನ್​ಗಳಿಸಿ ಅಂಜಲಿ ಸರ್ವಾಣಿಗೆ ವಿಕೆಟ್​ ಒಪಿಸಿದರು.

ಮೇಘನಾ ವಿಕೆಟ್​ ಬಿದ್ದರೂ ಕೂಡ ಆರ್​ಸಿಬಿ ರನ್​ ವೇಗ ಮಾತ್ರ ಕುಂಠಿತವಾಗಲಿಲ್ಲ. ದ್ವಿತೀಯ ವಿಕೆಟ್​ಗೆ ಆಡಲಿಳಿದ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್ ಎಲ್ಲಿಸ್​ ಪೆರ್ರಿ​ ತಾವೆದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಕ್ರೀಸ್​ನ ಮತ್ತೊಂದು ತುದಿಯಲ್ಲಿದ್ದ ನಾಯಕಿ ಸ್ಮೃತಿ ಮಂಧಾನ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. ಓವರ್​ಗೆ ಕನಿಷ್ಠ 2 ಬೌಂಡರಿಯಾದರೂ ಅವರು ಬಾರಿಸುತ್ತಲೇ ಸಾಗಿದರು.

ಬೊಂಬಾಟ್​ ಅರ್ಧಶತಕದ ಬಾರಿಸಿದ ಸ್ಮೃತಿ-ಪೆರ್ರಿ


ಸ್ಮೃತಿ ಮತ್ತು ಪೆರ್ರಿ ಸೇರಿಕೊಂಡು ಯುಪಿ ಬೌಲರ್​ಗಳನ್ನು ಸರಿಯಾಗಿ ದಂಡಿಸುವ ಮೂಲಕ ನೆರೆದಿದ್ದ 26 ಸಾವಿರಕ್ಕೂ ಅಧಿಕ ಕ್ರಿಕೆಟ್​ ಪ್ರೇಕ್ಷಕರಿಗೆ ಸಂಪೂರ್ಣ ರಸದೌತಣ ಒದಗಿಸಿದರು. 16 ಓವರ್​ ತನಕ ಬ್ಯಾಟಿಂಗ್​ ನಡೆಸಿದ ಸ್ಮೃತಿ ಮಂಧಾನ ಬರೋಬ್ಬರಿ 10 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 80 ರನ್​ಗಳಿಸಿ ವಿಕೆಟ್​ ಕೈಚೆಲ್ಲಿದರು. ಕೇವಲ 20 ರನ್​ ಕೊರತೆಯಿಂದ ಶತಕ ವಂಚಿತರಾದರು. ಒಟ್ಟು 37 ಎಸೆತ ಎದುರಿಸಿದ ಪೆರ್ರಿ ಸೊಗಸಾದ 4 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 58 ರನ್​ ಚಚ್ಚಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 95 ರನ್​ ಒಟ್ಟುಗೂಡಿಸಿದರು.

ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಕಿಟಕಿ ಗಾಜು ಪುಡಿಪುಡಿ


ಇದೇ ಪಂದ್ಯದಲ್ಲಿ ದೀಪ್ತಿ ಶರ್ಮ ಅವರು ಎಸೆದ 19ನೇ ಓವರ್​ನ 5ನೇ ಎಸೆತದಲ್ಲಿ ಎಲ್ಲಿಸ್‌ ಪೆರ್ರಿ ಬಾರಿಸಿದ ಸಿಕ್ಸರ್​ನಿಂದಾಗಿ ಕಾರಿನ ಕಿಟಕಿ ಗಾಜು ಪುಡಿಪುಡಿಯಾಯಿತು. ಟೂರ್ನಿಯಲ್ಲಿ ಸೂಪರ್ ಸ್ಟ್ರೈಕರ್ ಪಡೆದ ಆಟಗಾರ್ತಿಯರಿಗೆ ನೀಡಲಾಗುವ ಪ್ರದರ್ಶನ ಕಾರು ಇದಾಗಿತ್ತು. 16 ಆವೃತ್ತಿಯ ಪುರುಷರ ಐಪಿಎಲ್​ ಟೂರ್ನಿಯಲ್ಲಿಯೂ ಇದುವರೆಗೆ ಯಾರು ಕೂಡ ಸಿಕ್ಸರ್​ನಿಂದ ಕಾರಿನ ಗಾಜು ಹೊಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಎಲ್ಲಿಸ್​ ಪೆರ್ರಿ ಈ ಸಾಧನೆ ಮಾಡಿದ್ದಾರೆ.

ಯುಪಿ ಪರ ಶ್ರೀಲಂಕಾದ ಅನುಭವಿ ಆಟಗಾರ್ತಿ ಚಾಮರಿ ಅಟಪಟ್ಟು ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್​ ಓವರ್​ಗೆ 10ರಂತೆ ರನ್​ ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು. ಒಟ್ಟು ಮೂರು ಓವರ್​ ಎಸೆದ ಅಟಪಟ್ಟು 32 ರನ್​ ಬಿಟ್ಟುಕೊಟ್ಟರೆ, ರಾಜೇಶ್ವರಿ 43 ರನ್​ ನೀಡಿದರು. ಜತೆಗೆ ಉಭಯ ಆಟಗಾರ್ತಿಯರು ಕೂಡ ವಿಕೆಟ್​ ಲೆಸ್​ ಎನಿಸಿಕೊಂಡರು. ಸೋಫಿ ಎಕ್ಲೆಸ್ಟೋನ್ ಮಾತ್ರ ತಂಡದ ಪರ ನಿರೀಕ್ಷಿತ ಪ್ರದರ್ಶನ ತೋರಿದರು. 22 ರನ್​ ನೀಡಿ ಒಂದು ವಿಕೆಟ್​ ಪಡೆದರು.

Exit mobile version