Site icon Vistara News

WPL 2024: ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಗುಜರಾತ್; ಯುಪಿಗೆ 6 ವಿಕೆಟ್​ ಜಯ

Sophie Ecclestone removed both Gujarat Giants opener

ಬೆಂಗಳೂರು: ಗ್ರೇಸ್​ ಹ್ಯಾರಿಸ್(60*)​ ಅವರ ಅಜೇಯ ಅರ್ಧಶತಕದ ಆಟದಿಂದ ಯುಪಿ ವಾರಿಯರ್ಸ್(UP Warriorz)​ ತಂಡ ಗುಜರಾತ್ ಜೈಂಟ್ಸ್(Gujarat Giants)​ ವಿರುದ್ಧ 6 ವಿಕೆಟ್​ಗಳ ಗೆಲುವು ಸಾಧಿಸಿ ಸತತ 2ನೇ ಗೆಲುವು ದಾಖಲಿಸಿತು. ಗುಜರಾತ್​ಗೆ ಎದುರಾದ​ ಹ್ಯಾಟ್ರಿಕ್ ಸೋಲು ಇದಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 2ನೇ ಆವೃತ್ತಿಯ ಡಬ್ಲ್ಯುಪಿಎಲ್(WPL 2024)​ ಟೂರ್ನಿಯ 8ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಜೈಂಟ್ಸ್​ ಫೋಬೆ ಲಿಚ್ಫೀಲ್ಡ್(35) ಮತ್ತು ಆಶ್ಲೀಗ್ ಗಾರ್ಡನರ್(30) ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 142ರನ್ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್​ ತಂಡ ಆರಂಭದಲ್ಲಿ ನಾಟಕೀಯ ಕುಸಿತ ಕಂಡೂ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಗ್ರೇಸ್​ ಹ್ಯಾರಿಸ್ ನಡೆಸಿದ ಬಿರುಸಿನ ಬ್ಯಾಟಿಂಗ್​ ಪ್ರದರ್ಶನದಿಂದ 15.4 ಓವರ್​ನಲ್ಲಿ 4 ವಿಕೆಟ್​ ಕಳೆದುಕೊಂಡು 143 ರನ್ ಬಾರಿಸಿ ಗೆಲುವು ದಾಖಲಿಸಿತು.

ಚೇಸಿಂಗ್​ ವೇಳೆ ಯುಪಿ ನಾಯಕಿ ಅಲಿಸ್ಸಾ ಹೀಲಿ 33 ರನ್​ ಗಳಿಸಿ ಕ್ಯಾಥರಿನ್ ಬ್ರೈಸ್ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಿರಣ್ ನವಗಿರೆ ಅವರು ಈ ಪಂದ್ಯದಲ್ಲಿ 12 ರನ್​ ಗಳಿಸಿ ವಿಫಲಗೊಂಡರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಲಂಕಾದ ಅನುಭವಿ ಆಟಗಾರ್ತಿ ಚಾಮರಿ ಅಟಪಟ್ಟು ಕೂಡ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸುವಲ್ಲಿ ಯಶಸ್ಸು ಕಾಣಲಿಲ್ಲ. 11 ಎಸೆತ ಎದುರಿಸಿ 17 ರನ್​ಗೆ ಆಟ ಮುಗಿಸಿದರು. ಬಳಿಕ ಬಂದ ಶ್ವೇತಾ ಸೆಹ್ರಾವತ್​ ಕೂಡ 2 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು.

ಇದನ್ನೂ ಓದಿ WPL 2024: ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಬಂಧನ

ಅರ್ಧಶತಕ ಬಾರಿಸಿದ ಹ್ಯಾರಿಸ್


90 ರನ್​ಗೆ 4 ಪ್ರಮುಖ ಆಟಗಾರ್ತಿಯರನ್ನು ಕಳೆದುಕೊಂಡ ಯುಪಿ ವಾರಿಯರ್ಸ್​ ಆತಂಕಕ್ಕೆ ಸಿಲುಕಿತು. ಆದರೆ, ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿ ನಿಂತಿದ್ದ ಹ್ಯಾರಿಸ್ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಸಿಕ್ಸರ್​ ಮತ್ತು ಬೌಂಡರಿ ಸುರಿಮಳೆಗೈದು ಗುಜರಾತ್​ ಬೌಲರ್​ಗಳ ಬೆವರಿಳಿಸಿದರು. 33 ಎಸೆತಗಳನ್ನು ಎದುರಿಸಿ ನಿಂತ ಅವರು 9 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 60 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ದೀಪ್ತಿ ಶರ್ಮಾ ಅಜೇಯ 17 ರನ್​ ಕಲೆಹಾಕಿದರು. ಗುಜರಾತ್​ ಪರ ತನುಜಾ ಕನ್ವರ್ 2 ವಿಕೆಟ್​ ಕಡೆವಿದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಗುಜರಾತ್​ ಪರ ಮಧ್ಯಮ ಕ್ರಮಾಂಕದ ಆಟಗಾರರಾದ ಫೋಬೆ ಲಿಚ್ಫೀಲ್ಡ್ 35, ಆಲ್​ರೌಂಡರ್​ ಗಾರ್ಡನರ್ 30 ರನ್​ ಬಾರಿಸಿದರು. ಉಭಯ ಆಟಗಾರ್ತಿಯರೂ ಕೂಡ ತಲಾ 4 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿದರು. ಯುಪಿ ಪರ ವಿಶ್ವದ ನಂ.1 ಟಿ20 ಬೌಲರ್​, ಇಂಗ್ಲೆಂಡ್​ನ ಸೋಫಿ ಎಕ್ಲೆಸ್ಟೋನ್ 20 ರನ್​ ಅಂತರದಲ್ಲಿ 3 ವಿಕೆಟ್​ ಉರುಳಿಸಿದರು.

Exit mobile version