ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಯುಪಿ ವಾರಿಯರ್ಸ್(UP Warriorz) ತಂಡ 2ನೇ ಆವೃತ್ತಿಯ ಡಬ್ಲ್ಯೂಪಿಎಲ್ (WPL 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಈ ಸಾಧನೆಗೈದಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್(Mumbai Indians vs UP Warriorz) ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 161 ರನ್ ಬಾರಿಸಿತು. ಜವಾಬಿತ್ತ ಯುಪಿ ವಾರಿಯರ್ಸ್16.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಆಡಿದ 2 ಪಂದ್ಯಗಳಲ್ಲಿ ಯುಪಿ ಹೀನಾಯ ಸೋಲು ಕಂಡಿತ್ತು.
ಕಿರಣ್-ಅಲಿಸ್ಸಾ ಉತ್ತಮ ಜತೆಯಾಟ
ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ನಾಯಕಿ ಅಲಿಸ್ಸಾ ಹೀಲಿ ಮತ್ತು ಹಾರ್ಡ್ ಹಿಟ್ಟರ್ ಕಿರಣ್ ನವಗಿರೆ ಉತ್ತಮ ಜತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 94 ರನ್ಗಳನ್ನು ರಾಶಿ ಹಾಕಿತು. 6 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ ಕಿರಣ್ ನವಗಿರೆ 57 ರನ್ ಗಳಿಸಿ ಅಮೆಲಿಯಾ ಕೆರ್ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪತನಗೊಂಡು 3 ರನ್ ಒಟ್ಟುಗೂಡುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್ ಕೂಡ ಉದುರಿತು. ಅವರ ಗಳಿಕೆ 33. ಉಭಯ ಆಟಗಾರ್ತಿಯರ ವಿಕೆಟ್ ಕಳೆದುಕೊಂಡ ಬಳಿಕ ಆಡಲಿಳಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮ(ಅಜೇಯ 27) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಭಯ ಆಟಗಾರ್ತಿಯರು ಕೂಡ ಅಜೇಯರಾಗಿ ಉಳಿದರು. ಅಗ್ರೆಸಿವ್ ಬ್ಯಾಟಿಂಗ್ ನಡೆಸಿದ ಗ್ರೇಸ್ ಹ್ಯಾರಿಸ್ ಕೇವಲ 17 ಎಸೆತಗಳಿಂದ 38* ರನ್ ಚಚ್ಚಿದರು. ಮುಂಬೈ ಪರ ಇಸ್ಸಿ ವಾಂಗ್ 2 ವಿಕೆಟ್ ಪಡೆದರು.
ಇದನ್ನೂ ಓದಿ WPL 2024 : ಆರ್ಸಿಬಿ ತಂಡಕ್ಕೆ ಸತತ ಎರಡನೇ ಜಯ, ಗುಜರಾತ್ಗೆ ಹೀನಾಯ ಸೋಲು
Smashing it all across the park, Kiran Navgire has got off to a flying start 🔥🔥
— Women's Premier League (WPL) (@wplt20) February 28, 2024
Live – https://t.co/B5aPe30OXX #TATAWPL #MIvUPW pic.twitter.com/D28SxJH1pb
ಮ್ಯಾಥ್ಯೂಸ್ ಅರ್ಧಶತಕ ವ್ಯರ್ಥ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ ತಂಡಕ್ಕೆ ವೆಸ್ಟ್ ಇಂಡೀಸ್ನ ಆಲ್ರೌಂಡರ್ ಹೀಲಿ ಮ್ಯಾಥ್ಯೂಸ್ ಅರ್ಧಶತಕ ಬಾರಿಸಿ ಆಸರೆಯಾದರು. 47 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 55 ರನ್ ಬಾರಿಸಿದರು. ಇವರ ಜತೆಗಾರ್ತಿ ಯಾಸ್ತಿಕಾ ಭಾಟಿಯಾ 26ರನ್ ಬಾರಿಸಿದರು.
ಹಂಗಾಮಿ ನಾಯಕಿ ನ್ಯಾಟ್ ಸ್ಕಿವರ್ ಬ್ರಂಟ್ ಅವರು ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. 2 ಬೌಂಡರಿ ಬಾರಿಸಿ 19ರನ್ಗೆ ಸೀಮಿತರಾದರು. ಆ ಬಳಿಕ ಬಂದ ಅಮೆಲಿಯಾ ಕೆರ್ 23 ರನ್ ಗಳಿಸಿದರು. ಉಳಿದಂತೆ ಯಾರು ಹೆಚ್ಚುಹೊತ್ತು ಕ್ರೀಸ್ ಆಕ್ರಮಿಸಲು ಯಶಸ್ಸು ಕಾಣಲಿಲ್ಲ. ತಂಡದ ಖಾಯಂ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಗಾಯದಿಂದಾಗಿ ಈ ಪಂದ್ಯದಿಂದ ಹೊರಗುಳಿದರು. ಯುಪಿ ವಾರಿಯರ್ಸ್ ಪರ ಬೌಲಿಂಗ್ ಮಾಡಿದ 5 ಮಂದಿಯೂ ತಲಾ ಒಂದೊಂದು ವಿಕೆಟ್ ಪಡೆದರು.