Site icon Vistara News

WPL 2024: ಮುಂಬೈ ವಿರುದ್ಧ ತವರಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್

Marizanne Kapp struck on her fourth ball of the chase

ನವದೆಹಲಿ: ತವರಿನ ಉದ್ಘಾಟನಾ ಪಂದ್ಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಭರ್ಜರಿ ಗೆಲುವಿನ ಶುಭಾರಂಭ ಕಂಡಿದೆ.​ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ 29 ರನ್​ಗಳ​ ಗೆಲುವಿನ ನಗೆ ಬೀರಿದೆ. ಮೆಗ್​ ಲ್ಯಾನಿಂಗ್​(53), ಜೆಮಿಮಾ ರೋಡ್ರಿಗಸ್(69*)​ ಅವರ ಅರ್ಧಶತಕ ಹಾಗೂ ಜೆಸ್ ಜೊನಾಸೆನ್(3 ವಿಕೆಟ್​) ಅವರ ಬೌಲಿಂಗ್​ ಪರಾಕ್ರಮ ಡೆಲ್ಲಿ ಸರದಿಯ ಪ್ರಮುಖ ಹೈಲೆಟ್ಸ್​ ಆಗಿತ್ತು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್​(WPL 2024) ಲೀಗ್​ನ 12ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ನಿಗದಿತ ತವರಿನ ಸಂಪೂರ್ಣ ಲಾಭವೆತ್ತಿ 20 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 192 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಕಂಡು ಬೆಚ್ಚಿಬಿದ್ದ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ವಿಕೆಟ್​ ಕಳೆದುಕೊಂಡು ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ಗೆ 163 ರನ್​ ಗಳಿಸಿ ಹೀನಾಯ ಸೋಲು ಕಂಡಿತು.

​ಕಳೆದ 2 ಪಂದ್ಯಗಳಿಂದ ಹೊರಗುಳಿದಿದ್ದ ಹರ್ಮನ್​ಪ್ರೀತ್​ ಕೌರ್​ ಅವರು ಈ ಪಂದ್ಯದಲ್ಲಿ ಆಡಲಿಳಿದು ಮತ್ತೆ ನಾಯಕತ್ವ ವಹಿಸಿಕೊಂಡರು. ಆದರೆ, ಅವರ ಆಗಮನದಿಂದ ತಂಡಕ್ಕೆ ದೊಡ್ಡ ಲಾಭವೇನು ಆಗಲಿಲ್ಲ. 6 ರನ್​ಗೆ ಔಟಾದರು. ಈ ಮೊತ್ತಕ್ಕೆ 6 ಎಸೆತ ಕೂಡ ಎದುರಿಸಿದರು. ಭರವಸೆಯ ಆಟಗಾರ್ತಿ ನ್ಯಾಟ್‌ ಸ್ಕಿವರ್‌ ಬ್ರಂಟ್‌(5), ಯಾಸ್ತಿಯಾ ಭಾಟಿಯಾ(6) ಕೂಡ ಅಗ್ಗಕ್ಕೆ ಔಟಾದರು. ಅಮನ್ಜೋತ್ ಕೌರ್ 42 ರನ್​ ಬಾರಿಸಿ ತಂಡದ ಪರ ಅತ್ಯಧಿಕ ರನ್​ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಅಂತಿಮ ಹಂತದಲ್ಲಿ ಎಸ್ ಸಜನಾ ಅಜೇಯ 24 ರನ್​ ಬಾರಿಸಿದರು. ಡೆಲ್ಲಿ ಪರ ಜೆಸ್ ಜೊನಾಸೆನ್ 21 ರನ್​ ವೆಚ್ಚದಲ್ಲಿ 3 ವಿಕೆಟ್​ ಕಿತ್ತು ಮಿಂಚಿದರು.

ಇದನ್ನೂ ಓದಿ WPL 2024: ಕನ್ನಡತಿ ವೃಂದಾ ದಿನೇಶ್ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ಉಮಾ ಚೆಟ್ರಿ ಆಯ್ಕೆ

ಉತ್ತಮ ಆರಂಭ ಪಡೆದ ಡೆಲ್ಲಿ


ಡೆಲ್ಲಿ ಪರ ಇನಿಂಗ್ಸ್​ ಆರಂಭಿಸಿದ ಲ್ಯಾಡಿ ಸೆಹವಾಗ್​ ಖ್ಯಾತಿಯ ಶಫಾಲಿ ವರ್ಮ ಅವರು ಆರಂಭದಿಂದಲೇ ಮುಂಬೈ ಬೌಲರ್​ಗಳ ಮೇಲೆರಗಿ ತಮ್ಮ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. ಅವರ ಈ ಸ್ಫೋಟಕ ಬ್ಯಾಟಿಂಗ್​ ವೇಳೆ ಒಂದು ಜೀವದಾನ ಕೂಡ ಸಿಕ್ಕಿತ್ತು. ಅಂತಿಮವಾಗಿ 28 ರನ್​ಗೆ ವಿಕೆಟ್​ ಕೈಚೆಲ್ಲಿದರು. ಈ ಮೊತ್ತವನ್ನು ಕೇವಲ 12 ಎಸೆತಗಳಿಂದ ದಾಖಲಿಸಿದರು. ಸಿಡಿದ್ದು 2 ಸಿಕ್ಸರ್​ ಮತ್ತು 3 ಬೌಂಡರಿ.

ಶಫಾಲಿ ವಿಕೆಟ್​ ಪತನದ ಬಳಿಕ ಮೆಗ್​ ಲ್ಯಾನಿಂಗ್ ಕೂಡ ತಮ್ಮ ಆಟಕ್ಕೆ ಚುರುಕು ಮುಟ್ಟಿಸಿದರು. 12 ಓವರ್​ ತನಕ ಬ್ಯಾಟಿಂಗ್​ ಕಾಯ್ದುಕೊಂಡ ಲ್ಯಾನಿಂಗ್​ 38 ಎಸೆತಗಳಿಂದ 6 ಬೌಂಡರಿ ಮತ್ತು 2 ಸೊಗಸಾದ ಸಿಕ್ಸರ್​ ನೆರವಿನಿಂದ 53ರನ್​ ಬಾರಿಸಿದರು. ಇದು ಲ್ಯಾನಿಂಗ್​ ಅವರ ಸತತ 2 ಅರ್ಧಶತಕ. ಇದಕ್ಕೂ ಮುನ್ನ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.

ಜೆಮಿಮಾ ಅರ್ಧಶತಕ

ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ ರೋಡಿಗ್ರಸ್​ ಭರವಸೆಯ ಆಟವಾಡಿದರು. ಕೊನೆಯ ತನಕ ಬ್ಯಾಟಿಂಗ್​ ನಡೆಸಿದ ಅವರು 33 ಎಸೆತಗಳಿಂದ 69 ರನ್​ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಅರ್ಧಶತಕದ ಇನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್​ ದಾಖಲಾಯಿತು. ಉಳಿದಂತೆ ಆಲಿಸ್ ಕ್ಯಾಪ್ಸಿ 19 ರನ್​ ಬಾರಿಸಿದರು. ಮುಂಬೈ ಪರ ಪ್ರಧಾನ ಬೌಲರ್​ ಶಬ್ನಿಮ್ ಇಸ್ಮಾಯಿಲ್ ಈ ಪಂದ್ಯದಲ್ಲಿ ಸರಿಯಾಗಿ ದಂಡಿಸಿಕೊಂಡರು. 4 ಓವರ್​ ಎಸೆದು 11ರ ಸರಾಸರಿಯಲ್ಲಿ 46 ರನ್​ ಬಿಟ್ಟುಕೊಟ್ಟರು. ಕಿತ್ತದ್ದು ಒಂದು ವಿಕೆಟ್​ ಮಾತ್ರ. ಮುಂಬೈ ತಂಡದ ಫೀಲ್ಡಿಂಗ್​ ಕೂಡ ಈ ಪಂದ್ಯದಲ್ಲಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿತ್ತು. ಹಲವು ಕ್ಯಾಚ್​ ಜತೆಗೆ ಬೌಂಡರಿಗಳನ್ನು ಕೂಡ ತಡೆಯುವಲ್ಲಿ ಎಡವಿದರು. ಇದು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

Exit mobile version