ಬರ್ಮಿಂಗ್ಹಮ್: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಭಾರತದ ಕುಸ್ತಿಪಟುಗಳ ಸಾಧನೆ ಮುಂದುವರಿಯುತ್ತಲೇ ಇದ್ದು, ೧೯ ವರ್ಷದ ನವೀನ್ ೭೪ ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರು ಪಾಕಿಸ್ತಾನದ ಮುಹಮ್ಮದ್ ಶರಿಫ್ ತಾಹಿರ್ ಅವರನ್ನು ಮಣಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೩೪ಕ್ಕೆ ಏರಿದೆ. ಇದರಲ್ಲಿ ಭಾರತೀಯ ಕುಸ್ತಿಪಟುಗಳೇ ಆರು ಬಂಗಾರದ ಪದಕಗಳನ್ನು ಭಾರತಕ್ಕೆ ಗೆದ್ದು ಕೊಟ್ಟಿದ್ದಾರೆ.
ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ನವೀನ್ ಅವರು ಎದುರಾಳಿ ಪಾಕಿಸ್ತಾನದ ಮುಹಮ್ಮದ್ ಶರಿಫ್ ವಿರುದ್ಧ ಸಂಪೂರ್ಣ ಪಾರಮ್ಯ ಸಾಧಿಸಿದರು. ಅಲ್ಲದೆ, ೯-೦ ಅಂತರದಿಂದ ಗೆಲುವು ಸಾಧಿಸಿದರು.
ನವೀನ್ ಅವರ ಬಂಗಾರದ ಪದಕದ ಸೇರ್ಪಡೆಯೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೩೪ಕ್ಕೆ ಏರಿಕೆಯಾಗಿದೆ. ಇದರಲ್ಲಿ ೧೨ ಚಿನ್ನದ ಪದಕಗಳಾದರೆ, ತಲಾ ೧೧ ಬೆಳ್ಳಿ ಹಾಗೂ ಕಂಚಿನ ಪದಕಗಳಾಗಿವೆ. ಭಾರತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ೫೬ ಚಿನ್ನ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನ, ೪೮ ಚಿನ್ನ ಗೆದ್ದಿರುವ ಇಂಗ್ಲೆಂಡ್ ಎರಡನೇ ಸ್ಥಾನ, ೧೯ ಚಿನ್ನ ಗೆದ್ದಿರುವ ಕೆನಡಾ ಮೂರನೇ ಸ್ಥಾನ ಹಾಗೂ ೧೭ ಚಿನ್ನ ಗೆದ್ದಿರುವ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.