Site icon Vistara News

Wrestler Protest | ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಬ್ರಿಜ್ ಭೂಷಣ್

Brij Bhushan

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ(Wrestler Protest) ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತನ್ನ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಜತೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಜತೆ ನಾಲ್ಕು ಗಂಟೆಗಳ ಕಾಲ ನಡೆದ ತಡರಾತ್ರಿಯ ಸಭೆಯಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಬಳಿಕ ಬ್ರಿಜ್​ ಭೂಷಣ್ ಶರಣ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಈ ಆರೋಪ ಕೇಳಿ ಬಂದ ಬಳಿಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಒಂದೊಮ್ಮೆ ಈ ಆರೋಪ ನಿಜವಾದಲ್ಲಿ ತಾನು ಗಲ್ಲು ಶಿಕ್ಷೆಗೂ ಸಿದ್ಧನಿದ್ದೇನೆ ಎಂದು ಹೇಳಿದ್ದರು. ಇದೀಗ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾದ ಬಳಿಕ ತಾನು ಈ ಆರೋಪ ಹೊತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅತ್ತ ಕುಸ್ತಿ ಪಟುಗಳು ರಾಜಿನಾಮೆ ನೀಡುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಈ ಪ್ರಕರಣ ಯಾವ ರೀತಿಯಲ್ಲಿ ಅಂತ್ಯ ಕಾಣಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಬುಧವಾರ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಪೋಗಟ್ ಅವರು ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿಗಳು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಇದೇ ವಿಚಾರವಾಗಿ ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಒಲಿಂಪಿಕ್ ಪದಕ ವಿಜೇತರಾದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಮೂರು ದಿನಗಳಿಂದ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Wrestling Federation of India ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವುದು ಯಾಕೆ? ಅವರ ಆರೋಪಗಳೇನು; ಏನಿದು ಪ್ರಕರಣ?

Exit mobile version