ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಸತತವಾಗಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಕುಸ್ತಿಪಟುಗಳಿಗೆ ಅಲ್ಪ ಮುನ್ನಡೆ ಸಿಕ್ಕಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಬ್ರಿಜ್ ಭೂಷಣ್ ಸಿಂಗ್ ಅವರನ್ನು ಜೈಲಿಗೆ ಹಾಕದ ಹೊರತಾಗಿ ಪ್ರತಿಭಟನೆ (Wrestlers Protest) ನಿಲ್ಲಿಸುವುದಿಲ್ಲ ಎಂದು ಕುಸ್ತಿಪಟುಗಳು ಎಚ್ಚರಿಕೆ ನೀಡಿದ ಬೆನ್ನಲ್ಲೇ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ.
ದೆಹಲಿಯ ಕನೌಟ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. “ಬಾಲಕಿಯೊಬ್ಬರು ನೀಡಿದ ದೂರಿನ ಮೇರೆಗೆ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ಪೋಕ್ಸೋ ಹಾಗೂ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಬ್ಬರು ನೀಡಿದ ದೂರಿನ ಮೇರೆಗೆ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಡಿಸಿಪಿ ಪ್ರಣವ್ ತಾಯಲ್ ಮಾಹಿತಿ ನೀಡಿದ್ದಾರೆ. ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾದ ಕಾರಣ ಶೀಘ್ರದಲ್ಲಿಯೇ ಬಂಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
2012 ರಿಂದ 2022ರವರೆಗೆ 10 ವರ್ಷಗಳ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಸಂಸದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿ ಏಪ್ರಿಲ್ 21 ರಂದು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ಆದರೆ ಡೆಲ್ಲಿ ಪೊಲೀಸರು ಬ್ರಿಷ್ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಮಂಗಳವಾರ ಸುಪ್ರೀಮ್ ಕೋರ್ಟ್ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಲಾಗಿದೆ.
ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧದ ಆರೋಪಗಳ ಬಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಇನ್ನೂ ತನಿಖೆಯನ್ನು ಪೂರ್ಣಗೊಳಿಸಿಲ್ಲ. ಇದೇ ವೇಳೆ ಸರ್ಕಾರ ರಚಿಸಿದ ಮೇಲ್ವಿಚಾರಣಾ ಸಮಿತಿಯ ವರದಿಯನ್ನೂ ಇನ್ನೂ ಬಹಿರಂಗಪಡಿಸಲಾಗಿಲ್ಲ. ಮೂರು ತಿಂಗಳ ಸುದೀರ್ಘ ಕಾಯುವಿಕೆಯಿಂದ ನಿರಾಸೆಗೊಂಡ ಕುಸ್ತಿಪಟುಗಳು ಏಪ್ರಿಲ್ 23 ರಂದು ತಮ್ಮ ಪ್ರತಿಭಟನೆ ಆರಂಭಿಸಿದ್ದರು. ಹಾಗೆಯೇ, ಬ್ರಿಜ್ ಭೂಷಣ್ ಸಿಂಗ್ ಅವರ ಬಂಧನವಾಗದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಹಾಗೆಯೇ, ನೀರಜ್ ಚೋಪ್ರಾ ಸೇರಿ ಹಲವು ಕ್ರೀಡಾಪಟುಗಳು ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: Wrestlers Protest : ಬ್ರಿಜ್ ಭೂಷಣ್ ಕಂಬಿ ಎಣಿಸುವ ತನಕ ಪ್ರತಿಭಟನೆ ನಿಲ್ಲುವುದಿಲ್ಲ; ಕುಸ್ತಿಪಟುಗಳ ಪಣ