ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣಕ್ಕೆ ಮಹತ್ವದ ತಿರುವೊಂದು ಲಭಿಸಿದೆ. ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಜೂನ್ 15ರ ತನಕ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ದೂರು ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಯೂ-ಟರ್ನ್ ಹೊಡೆದಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿರುವುದಾಗಿ ಅಪ್ರಾಪ್ತ ಬಾಲಕಿಯ ತಂದೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಜತೆಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ಬಾಲಕಿಯ ತಂದೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಇಷ್ಟು ದಿನ ಎಲ್ಲ ಮಹತ್ವದ ಟೂರ್ನಿಯನ್ನು ಬಹಿಷ್ಕರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಸೇರಿ ಹಲವು ಕುಸ್ತಿಪಟುಗಳ ಹೋರಾಟ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಪ್ರಕರಣ ದಾಖಲಿಸಲು ಕಾರಣವೇನು?
ಬ್ರಿಜ್ ಭೂಷಣ್ ವಿರುದ್ಧ ಈ ಸುಳ್ಳು ಪ್ರಕರಣ ದಾಖಲಿಸಲು ಪ್ರಮುಖ ಕಾರಣ ಏನೆಂಬುದನ್ನು ಕೂಡ ಬಾಲಕಿಯ ತಂದೆ ಹೇಳಿದ್ದಾರೆ. 2022ರಲ್ಲಿ ಲಕ್ನೋದಲ್ಲಿ ನಡೆದಿದ್ದ ಏಷ್ಯನ್ ಅಂಡರ್-17 ಚಾಂಪಿಯನ್‌ಶಿಪ್ ಟ್ರಯಲ್ಸ್ನ ಫೈನಲ್‌ನಲ್ಲಿ ಸೋತ ಬಳಿಕ ತನ್ನ ಮಗಳಿಗೆ ಭಾರತೀಯ ತಂಡಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ರೆಫ್ರಿಯ ತಪ್ಪು ನಿರ್ಧಾರಗಳಿಂದಾಗಿ ಮಗಳು ಫೈನಲ್‌ನಲ್ಲಿ ಸೋಲು ಕಾಣಬೇಕಾಯಿತು. ಇದಕ್ಕೆ ಬ್ರಿಜ್ ಭೂಷಣ್ ಅವರೇ ಕಾರಣ. ಮಗಳ ಒಂದು ವರ್ಷದ ಪರಿಶ್ರಮ ನೀರುಪಾಲಾಯಿತು ಎಂಬ ಕಾರಣಕ್ಕೆ ನಾನು ಬ್ರಿಜ್ ಭೂಷಣ್ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ನಿರ್ಧಾರ ಕೈಗೊಂಡೆ ಎಂದು ಬಾಲಕಿಯ ತಂದೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ Wrestlers Protest: ಜೂನ್ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು
ರೆಫ್ರಿ ತಪ್ಪಿಗೆ ಬ್ರಿಜ್ಭೂಷಣ್ ಮೇಲೇಕೆ ಕೋಪ?
ರೆಫ್ರಿ ಮಾಡಿದ ತಪ್ಪಿಗೆ ಬ್ರಿಜ್ ಭೂಷಣ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಣವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಬಾಲಕಿಯ ತಂದೆ, ರೆಫರಿಯನ್ನು ನಿಯೋಜಿಸಿದವರು ಯಾರು? ಅದು ಫೆಡರೇಶನ್, ಫೆಡರೇಶನ್ ಮುಖ್ಯಸ್ಥರು ಯಾರು? ಬ್ರಿಜ್ ಭೂಷಣ್. ಹೀಗಾಗಿ ಅವರ ಮೇಲೆ ನಾನು ದ್ವೇಷ ಸಾಧಿಸಲು ಮುಂದಾದೆ ಎಂದರು. ಇದೇ ವೇಳೆ ಪಿಟಿಐ ಸಂದರ್ಶಕ, ನೀವು ನೀಡಿದ ದೂರಿನ ಮೇರೆಗೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ತನಿಖೆ ನಡೆಯುತ್ತಿದೆ. ಈಗ ಏಕೆ ನೀವು ನಿಮ್ಮ ನಿರ್ಧಾರ ಬದಲಾಯಿದ್ದೀರ ಎಂಬ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಅಪ್ರಾಪ್ತ ಕುಸ್ತಿಪಟುವಿನ ತಂದೆ ಕೋರ್ಟ್‌ನಲ್ಲಿ ಸತ್ಯ ಹೇಗಾದರೂ ಹೊರಬರುತ್ತದೆ ಎಂದು ನನಗೆ ತಿಳಿದಿದೆ. ಆದರೆ ಇದೀಗ ಅಲ್ಲಿಗೆ ಹೋಗುವಾ ಮೊದಲೇ ಸತ್ಯ ಬಹಿರಂಗಗೊಂಡರೆ ಉತ್ತಮ ಎಂದು ನನಗೆ ಅನಿಸಿತು ಇದೇ ಕಾರಣಕ್ಕೆ ನಾನು ನನ್ನ ತಪ್ಪನ್ನು ಒಪ್ಪಿಕೊಂಡೆ ಎಂದರು.
ಒಂದು ಸೋಲಿಗೆ ಈ ನಿರ್ಧಾರ ಏಕೆ?
ಕೇವಲ ಒಂದು ಪಂದ್ಯದ ಸೋಲಿಗಾಗಿ ನೀವು ಇಷ್ಟು ಕೀಳು ಮಟ್ಟದ ಆರೋಪ ಹೊರಿಸಲು ಕಾರಣವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಕುಸ್ತಿಪಟುವಿನ ತಂದೆ, ಇದು ನಿಮಗೆ ಕೇವಲ ಒಂದು ಸೋಲಾಗಿ ಕಾಣಬಹುದು. ಆದರೆ ಇದು ಒಂದು ವರ್ಷದ ಕಠಿಣ ಪರಿಶ್ರಮ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕಷ್ಟಪಟ್ಟು ಪುನರಾಗಮನ ಮಾಡುತ್ತಿರುವ ಮಗುವಿನ ನೋವು ಒಬ್ಬ ತಂದೆಗೆ ಮಾತ್ರ ಗೊತ್ತು. ನನ್ನ ಮಗಳ ನೋವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆ ಒಂದು ಪಂದ್ಯದ ಸೋಲಿನಿಂದ 4 ಅಂತಾರಾಷ್ಟ್ರೀಯ ಟೂರ್ನಿ ಕೈತಪ್ಪಿತು. ಇದೆಲ್ಲವನ್ನು ಕಂಡ ನಾನು ಅಂತಿಮವಾಗಿ ಈ ನಿರ್ಧಾರವನ್ನು ಕೈಗೊಂಡೆ ಎಂದು ಹೇಳಿದರು.
ದೂರು ಹಿಂಪಡೆಯಲು ಕಾರಣವೇನು?
ತಮ್ಮ ತಪ್ಪನ್ನು ಮತ್ತು ದೂರು ಹಿಂಪಡೆಯುವ ಕುರಿತು ಸ್ಪಷ್ಟನೆ ನೀಡಿರುವ ಕುಸ್ತಿಪಟುವಿನ ತಂದೆ, ತನ್ನ ಮಗಳ ಸೋಲಿನ ಬಗ್ಗೆ ನ್ಯಾಯಯುತ ತನಿಖೆಗೆ ಸರ್ಕಾರ ಭರವಸೆ ನೀಡಿದೆ. ಹಾಗಾಗಿ ನಾನು ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ ಎಂದು ಹೇಳಿದರು.