Site icon Vistara News

Wrestlers Protest: ಬ್ರಿಜ್​ ಭೂಷಣ್​ ಬಂಧನ ಸಾಧ್ಯವಿಲ್ಲ; ಪೊಲೀಸರು ಹೀಗೆ ಹೇಳಲು ಕಾರಣವೇನು?

brij bhushan sharan singh news

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಯಾವುದೇ ಕಾರಣಕ್ಕೂ ಬಂಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕುಸ್ತಿಪಟುಗಳು ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಈ ಬಗ್ಗೆ ವರದಿಯನ್ನು ಕೋರ್ಟ್​ಗೆ 15 ದಿನಗಳ ಒಳಗೆ ಸಲ್ಲಿಸುತ್ತೇವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

“ಕುಸ್ತಿಪಟುಗಳು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. 15 ದಿನಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ಅದು ಚಾರ್ಜ್ ಶೀಟ್ ಆಗಿರಬಹುದು ಅಥವಾ ಅಂತಿಮ ವರದಿಯೂ ಆಗಿರಬಹುದು” ಎಂದು ದೆಹಲಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಗಳವಾರ ದೆಹಲಿಯ ಹೈಕೋರ್ಟ್​ ಬ್ರಿಜ್‌ಭೂಷಣ್ ಶರಣ್ ಸಿಂಗ್ ಪ್ರಕರಣದ ಬಗ್ಗೆ ದೆಹಲಿ ಸರ್ಕಾರ ಮತ್ತು ಪೊಲೀಸರಿಂದ ಸ್ಪಷ್ಟನೆ ಕೇಳಿತ್ತು. ತನಿಖೆಯ ಬಗ್ಗೆ ಮಾಹಿತಿ ನೀಡುವಂತೆ ಮತ್ತು ದಾಖಲಾದ ಎರಡು ಪ್ರಕರಣಗಳು ಯಾವ ಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿತ್ತು. ಇದೀಗ ಪೊಲೀಸರು ಸರಿಯಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಬೆನ್ನಿಗೆ ನಿಂತ ರಾಬಿನ್‌ ಉತ್ತಪ್ಪ

ಕುಸ್ತಿಪಟುಗಳ ಹೇಳಿಕೆಯನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ. ಎಫ್‌ಐಆರ್‌ನಲ್ಲಿ ಸೇರಿಸಲಾದ ಲೈಂಗಿಕ ಅಪರಾಧಕ್ಕೆ ಪೋಕ್ಸೊ ಸೆಕ್ಷನ್‌ ಅಡಿ ಏಳು ವರ್ಷ ಜೈಲು ಶಿಕ್ಷೆ ಇದೆ. ಹೀಗಾಗಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಆರೋಪಿಗಳು ಹೇಳಿದ ಮಾತ್ರಕ್ಕೆ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಆರೋಪಿಯು ಸಾಕ್ಷಿಯ ಮೇಲೆ ಪ್ರಭಾವ ಬೀರುವುದಿಲ್ಲ ಅಥವಾ ಸಾಕ್ಷ್ಯವನ್ನು ನಾಶಪಡಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈಗಾಗಲೇ ಕುಸ್ತಿಪಟುಗಳು ಮತ್ತು ಅವರ ಬೆಂಬಲಕ್ಕೆ ನಿಂತಿರುವ ರೈತ ಸಂಘಟನೆಗಳು ತೀವ್ರ ಸ್ವರೂಪದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ವಿಚಾರವಾಗಿ ಬುಧವಾರ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಅವರು ಇತರ ಸಂಘಟನೆಗಳ ಜತೆಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಪೊಲೀಸರ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸದ್ಯ ಪ್ರತಿಭಟನೆಯ ಕಿಚ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೊಂದು ಕಂಡುಬಂದಿದೆ.

Exit mobile version