Site icon Vistara News

Wrestlers Protest : ಕುಸ್ತಿಪಟುಗಳ ಬಾಯಿ ಮುಚ್ಚಿಸಿದರೇ ಅಮಿತ್​ ಶಾ? ಕೆಲಸಕ್ಕೆ ಮರಳಿದ ಸಾಕ್ಷಿ

Sakshi Malik

#image_title

ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ಭೂಷನ್​ ಸಿಂಗ್ ಶರಣ್​ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ಜತೆ ಮಾತನಾಡಿರುವ ಕೇಂದ್ರ ಗೃಹಮಂತ್ರಿ ಅಮಿತ್​ ಶಾ, ಪರಿಹಾರವೊಂದರನ್ನು ಕಂಡುಕೊಂಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಕುಸ್ತಿಪಟುಗಳ ಜತೆ ಉನ್ನತಮಟ್ಟದ ಸಭೆ ನಡೆಸಿದ ಅಮಿತ್​ ಶಾ ಅವರು ಕುಸ್ತಿಪಟುಗಳು ನೀಡುತ್ತಿದ್ದ ನಿರಂತರ ಹೇಳಿಕೆಗಳಿಗೂ ಬ್ರೇಕ್​ ಹಾಕಿದ್ದಾರೆ ಎನ್ನಲಾಗಿದೆ. ಶುಕ್ರವಾರ ಕುಸ್ತಿಪಟು ಸಾಕ್ಷಿ ಮಲಿಕ್​ ಅವರು ರೈಲ್ವೆ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, ಎಎನ್​​ಐ ಜತೆ ಮಾತನಾಡಿದ ಸಾಕ್ಷಿ ಮಲಿಕ್​, ನಮ್ಮ ಬೇಡಿಕೆ ಈಡೇರಿಲ್ಲ ಎಂಬುದಾಗಿ ಹೇಳಿಕೆ ಕೊಟ್ಟಿದ್ದಾರೆ.

“ಇದು ಸಾಮಾನ್ಯ ಮಾತುಕತೆಯಾಗಿತ್ತು. ಸಭೆಯಲ್ಲಿ ಯಾವುದೇ ಅಂತಿಮ ಪರಿಹಾರವನ್ನು ಸಾಧಿಸಲಾಗಲಿಲ್ಲ. ಆರೋಪಿಗಳನ್ನು ಬಂಧಿಸಬೇಕೆಂಬ ನಮ್ಮ ಬೇಡಿಕೆಯೂ ಮುಂದುವರಿಯುತ್ತದೆ” ಎಂದು ಮಲಿಕ್ ತಿಳಿಸಿದ್ದಾರೆ.

ಮಲಿಕ್ ಮತ್ತು ಬಜರಂಗ್ ಪುನಿಯಾ ಮತ್ತು ಸಹ ಒಲಿಂಪಿಯನ್ ಮತ್ತು ವಿಶ್ವ ಚಾಂಪಿಯನ್​​ಷಿಪ್​ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿ ಏಳು ಕುಸ್ತಿಪಟುಗಳ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಅವರೆಲ್ಲರೂ ಒತ್ತಾಯಿಸಿದ್ದಾರೆ. ಆದರೆ, ಸಿಂಗ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ನಾವು ನಮ್ಮ ಹೆಸರುಗಳನ್ನು ಹಿಂತೆಗೆದುಕೊಂಡಿಲ್ಲ, ವಿನೇಶ್, ನಾನು ಮತ್ತು ಭಜರಂಗ್ ಈ ಪ್ರತಿಭಟನೆಯಲ್ಲಿ ಒಟ್ಟಿಗೆ ಇದ್ದೇವೆ ಮತ್ತು ನಾವು ನಮ್ಮ ಹೆಸರುಗಳನ್ನು ಹಿಂತೆಗೆದುಕೊಂಡಿಲ್ಲ” ಎಂದು ಮಲಿಕ್ ಎಎನ್ಐಗೆ ತಿಳಿಸಿದರು.

ವರದಿಗಳ ಪ್ರಕಾರ, ಕಳೆದ ಜನವರಿಯಲ್ಲಿ ಪ್ರತಿಭಟನೆ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಅಮಿತ್​ ಶಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಇದಕ್ಕೂ ಮೊದಲು ಕುಸ್ತಿಪಟುಗಳ ಜತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತ್ರ ಸಭೆ ನಡೆಸಿದ್ದರು.

ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸಲು ಹರಿದ್ವಾರಕ್ಕೆ ತೆರಳಿದ್ದ ನಂತರ ಈ ಪ್ರತಿಭಟನೆ ಹೆಚ್ಚು ಕಾವು ಪಡೆದುಕೊಂಡಿತ್ತು. ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಜೂನ್ 9 ರೊಳಗೆ ಬಂಧಿಸುವಂತೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ. ಸಾಕ್ಷಿ ಮಲಿಕ್ ಅವರ ತಂದೆ ಸುಖ್ಬೀರ್ ಮಲಿಕ್ ಮತನಾಡಿ, ನಮ್ಮೆರಡು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ ಎಂದು ಹೇಳಿದ್ದರು.

ನಮ್ಮ ಹೋರಾಟ ಮುಂದುವರಿಯುತ್ತದೆ: ಸಾಕ್ಷಿ ಮಲಿಕ್

ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸಾಕ್ಷಿ ಮಲಿಕ್​ ನಿರಾಕರಿಸಿದ್ದಾರೆ. ಮಲಿಕ್ ಈ ಹಿಂದೆ ದೆಹಲಿಯಲ್ಲಿರುವ ಉತ್ತರ ರೈಲ್ವೆ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು.

ನಾವು ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ. ಎಲ್ಲವೂ ವದಂತಿಗಳು. ಬಾಕಿ ಇರುವ ಕೆಲವು ಕೆಲಸಗಳನ್ನು ಮುಗಿಸಲು ನಾನು ಕಚೇರಿಗೆ ಬಂದಿದ್ದೇನೆ. ಮುಂದೆ ಏನು ಮಾಡಬೇಕು ಪ್ರತಿಭಟನೆಯನ್ನು ಅಹಿಂಸಾತ್ಮಕ ರೀತಿಯಲ್ಲಿ ಹೇಗೆ ಮುಂದುವರಿಸಬೇಕು ಎಂಬುದರ ಬಗ್ಗೆ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ಮಲಿಕ್ ಹೇಳಿದ್ದಾರೆ.

ಇದಕ್ಕೂ ಮೊದಲು,ಒಲಿಂಪಿಯನ್ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ. ಈ ಸುದ್ದಿ ಸಂಪೂರ್ಣವಾಗಿ ತಪ್ಪು. ನ್ಯಾಯಕ್ಕಾಗಿ ಹೋರಾಟದಲ್ಲಿ, ನಮ್ಮಲ್ಲಿ ಯಾರೂ ಹಿಂದೆ ಸರಿದಿಲ್ಲ, ನಾವು ಸಹ ಹಿಂದೆ ಸರಿಯುವುದಿಲ್ಲ. ಸತ್ಯಾಗ್ರಹದ ಜೊತೆಗೆ, ನಾನು ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ಪೂರೈಸಬೇಕಾಗಿದೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿಗಳನ್ನು ಹರಡಬೇಡಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.

Exit mobile version