ನವದೆಹಲಿ: ಲೈಂಗಿಕ ಕಿರುಕುಳ ಆರೋಪ(Sexual harassment allegations) ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರನ್ನು ಬಂಧಿಸುವಂತೆ ಒತ್ತಾಯಿಸಿ, ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಖ್ಯಾತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ(Wrestlers Protest) ಆರಂಭಿಸಿದ್ದಾರೆ.
ದೂರು ನೀಡಿ ಸುಮಾರು 2 ತಿಂಗಳು ಕಳೆದರೂ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ಕೂಡ ದಾಖಲಿಸದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಮತ್ತೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಕುಸ್ತಿಪಟುಗಳು ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ. ಜತೆಗೆ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿರುವುದು ಸಹ ಕಂಡು ಬಂದಿದೆ. ಇದೇ ಕಾರಣಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಕ್ಲೀನ್‌ಚಿಟ್ ಸಿಗಲಿದೆ ಎಂದು ವರದಿಯಾಗಿತ್ತು. ಈ ಎಲ್ಲ ಬೆಳವಣಿಗೆ ಬೆಳಕಿಗೆ ಬಂದ ಹಿನ್ನಲೆ ಕುಸ್ತಿ ಪಟುಗಳು ಮತ್ತೆ ಭಾರತದ ಕುಸ್ತಿ ಫೆಡರೇಷನ್ ವಿರುದ್ಧ ತೊಡೆ ತಟ್ಟಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ Wrestlers Protest: ಮತ್ತೆ ಪ್ರತಿಭಟನೆಗೆ ಮುಂದಾದ ಕುಸ್ತಿ ಪಟುಗಳು
ಭಾನುವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿರುವ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿ ಹಲವು ಕುಸ್ತಿಪಟುಗಳು ಫುಟ್ ಪಾತ್ನಲ್ಲಿಯೇ ಮಲಗಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶಕ್ಕಾಗಿ ಪೋಡಿಯಂ ಏರಿದ ಕುಸ್ತಿ ಪಟುಗಳು ಇದೀಗ ಫುಟ್ ಪಾತ್ನಲ್ಲಿ ಮಲಗಿರುವ ಪೋಟೊ ಕಂಡ ಹಲವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತ್ವರಿತವಾಗಿ ತನಿಖೆ ನಡೆಯಬೇಕು. ಈಗಾಗಲೇ ನಾವು ಮಾಡಿರುವ ಎಲ್ಲ ಆರೋಪವನ್ನು ಸುಳ್ಳು ಎಂದು ಬಿಂಬಿಸಲಾಗುತ್ತಿದೆ. ಜತೆಗೆ ಸಾಕ್ಷಿಗಳನ್ನು ಕೂಡ ನಾಶ ಮಾಡುತ್ತಿದ್ದಾರೆ. ಇದುವರೆಗೆ ನಾವು ನಿಮ್ಮ ಭರವಸೆಯಂತೆ ಶಾಂತ ರೀತಿಯಲ್ಲಿ ಕಾದಿದ್ದೇವೆ. ಆದರೆ ನಮಗೆ ಸೂಕ್ತ ನ್ಯಾಯ ಒದಗಿಸಿಲ್ಲ. ನಾವು ಅಪ್ರಾಪ್ತೆಯ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ಆಕೆಯ ಹೆಸರು ಮತ್ತು ವೃತ್ತಿ ಜೀವನ ಹಾಳಾಗುತ್ತದೆ. ಬ್ರಿಜ್ ಭೂಷಣ್ ಅವರನ್ನು ಬಂಧಿಸುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ”.