Site icon Vistara News

Wrestlers Protest: ಪ್ರತಿಭಟನೆಯಿಂದ ಹಿಂದೆ ಸರಿದರೇ ಸಾಕ್ಷಿ ಮಲಿಕ್?

Sakshi Malik

ನವದೆಹಲಿ: ಬ್ರಿಜ್​ಭೂಷಣ್​ ಸಿಂಗ್​ ಶರಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಪ್ರತಿಭಟನೆ (Wrestlers Protest) ನಡೆಸುತ್ತಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ ಅವರು ಸೋಮವಾರ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಆದರೆ ತಕ್ಷಣ ಟ್ವೀಟ್​ ಮೂಲಕ ಇದಕ್ಕೆ ಸ್ಪಷ್ಟನೆ ನೀಡಿದ ಸಾಕ್ಷಿ ಮಲಿಕ್​ ಅವರು ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಎಲ್ಲ ಕಡೆ ಸಾಕ್ಷಿ ಮಲಿಕ್​ ಅವರು ಪ್ರತಿಭಟನೆಯಿಂದ ಹಿಂದೆ ಸರಿದು ಮತ್ತೆ ತಮ್ಮ ಉತ್ತರ ರೈಲ್ವೆ ಇಲಾಖೆಯ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಜತೆಗೆ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ ಈ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಾಕ್ಷಿ ಮಲಿಕ್​ ಅವರೇ ಸ್ವತಃ ಟ್ವಿಟ್​ ಮಾಡುವ ಮೂಲಕ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಈ ಸುದ್ದಿ ಸಂಪೂರ್ಣ ಸುಳ್ಳು. ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ. ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ದಯವಿಟ್ಟು ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದು ಟ್ವಿಟ್​ ಮಾಡಿದ್ದಾರೆ.

ಸದ್ಯ ಪ್ರತಿಭಟನೆ ನಡೆಸುತ್ತಿದ್ದ ಬಜರಂಗ್​ ಪೂನಿಯಾ, ವಿನೇಶ್​ ಫೋಗಟ್​, ಸಾಕ್ಷಿ ಮಲಿಕ್ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ಆದರೆ ಯಾರು ಕೂಡ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ ಎಂದು ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಮೇ 28 ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿ ಬಂಧನಕೊಳ್ಳಗಾಗಿದ್ದರು. ಇದಾದ ಬಳಿಕ ಕುಸ್ತಿಪಟುಗಳ ಮೇಲೆ ಎಫ್​ಐಆರ್​ ದಾಖಲಿಸಲಾಗಿತ್ತು. ಬಳಿಕ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿ ಕುಸ್ತಿಪಟುಗಳನ್ನು ಜಂತರ್ ಮಂತರ್‌ಗೆ ಹಿಂತಿರುಗಿಸಲು ಅನುಮತಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು. ಇದೇ ವೇಳೆ ಎಲ್ಲ ಕುಸ್ತಿಪಟುಗಳು ತಮ್ಮ ತಮ್ಮ ಮನೆಗೆ ಮರಳಿದ್ದರು. ಆದರೆ ಸಾಕ್ಷಿ ಮಾತ್ರ ಏಕಾಂಗಿಯಾಗಿ ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದರು.

ಇದನ್ನೂ ಓದಿ Wrestlers Protest: ದೇಶಕ್ಕಾಗಿ ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲಿರುವ ಕುಸ್ತಿಪಟುಗಳು

ಅಮಿತ್ ಶಾ ಭೇಟಿ

ಮೂಲಗಳ ಪ್ರಕಾರ ಪ್ರತಿಭಟನೆ ನಡೆಸುತ್ತಿದ್ದ ಬಜರಂಗ್​ ಪೂನಿಯಾ, ವಿನೇಶ್​ ಫೋಗಟ್​, ಸಾಕ್ಷಿ ಮಲಿಕ್​ ಸೇರಿ ಕೆಲ ಪ್ರಮುಖ ಕುಸ್ತಿಪಟುಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version