Site icon Vistara News

WRESTLERS PROTEST: ಬ್ರಿಜ್‌ಭೂಷಣ್ ವಿರುದ್ಧ ಎಫ್ಐಆರ್‌ ದಾಖಲಿಸದ ದೆಹಲಿ ಪೊಲೀಸರಿಗೆ ನೋಟಿಸ್​ ನೀಡಿದ ಸುಪ್ರೀಂ ಕೋರ್ಟ್

WRESTLERS PROTEST: Supreme Court issues notice to Delhi Police for not registering FIR against Brijbhushan

WRESTLERS PROTEST: Supreme Court issues notice to Delhi Police for not registering FIR against Brijbhushan

ನವದೆಹಲಿ: ಲೈಂಗಿಕ ದೌರ್ಜನ್ಯ(Sexual harassment allegations) ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್(Brij Bhushan Sharan Singh)​ ವಿರುದ್ಧ ಎಫ್ಐಆರ್‌ ದಾಖಲಿಸದ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್​ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ. ಜತೆಗೆ ಎಫ್ಐಆರ್‌ ದಾಖಲಿಸುವಂತೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿಯಿಡೀ ಜಂತರ್‌ ಮಂತರ್‌ನ ಫುಟ್​ ಪಾತ್‌ನಲ್ಲಿ ಮಲಗಿ ಕಾಲ ಕಳೆದಿದ್ದ ಒಲಿಂಪಿಯನ್​ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಖ್ಯಾತ ಕುಸ್ತಿಪಟುಗಳು ಸೋಮವಾರದಂದು ಬ್ರಿಜ್‌ಭೂಷಣ್‌ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದರು. ಜತೆಗೆ ಈ ಬಾರಿ ನ್ಯಾಯ ಸಿಗುವ ವರೆಗೆ ಪ್ರತಿಭಟನೆಯಿಂದ(WRESTLERS PROTEST) ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ತಮ್ಮ ಪ್ರತಿಭಟನೆಗೆ ನೆರವು ನೀಡುವಂತೆ ಸಮಾಜದ ಎಲ್ಲ ವಲಯಗಳಿಗೂ ಮತ್ತು ರಾಜಕೀಯ ಪಕ್ಷಗಳಿಗೂ ಕರೆ ನೀಡಿದ್ದರು.

ಇದೀಗ ಕುಸ್ತಿಪಟುಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋದ ಕಾರಣ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್‌ ದಾಖಲಿಸದ ದೆಹಲಿ ಪೊಲೀಸರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಅಪ್ರಾಪ್ತ ಬಾಲಕಿ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳ ಮೇಳೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಪಿ ಎಸ್ ನರಸಿಂಹ ಅವರ ಪೀಠವು ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡಿದೆ.

ಕುಸ್ತಿಪಟುಗಳು ರಿಟ್ ಅರ್ಜಿಯಲ್ಲಿ ಮಾಡಿದ ಆರೋಪಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರ ಹೆಸರನ್ನು ಮರುರೂಪಿಸಲಾಗುವುದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ದೂರುಗಳನ್ನು ಮುಚ್ಚಿದ ಕವರ್‌ನಲ್ಲಿ ಇಡಬೇಕು ಎಂದು ಆದೇಶಿಸಿದೆ.

ಜನವರಿ ತಿಂಗಳಲ್ಲೇ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಆಗ ಮಧ್ಯರಾತ್ರಿ ನಡೆದ ಸಂಧಾನ ಸಭೆಯ ಬಳಿಕ ಕೇಂದ್ರ ಕ್ರೀಡಾಸಚಿವಾಲಯ ಮತ್ತು ಐಒಎಗಳು ತನಿಖಾ ಸಮಿತಿಗಳನ್ನು ರಚಿಸಿದ್ದವು. ಹೀಗಾಗಿ ಕುಸ್ತಿಪಟುಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು. ತನಿಖಾ ಸಮಿತಿಗಳು ತಮ್ಮ ವಿಚಾರಣೆಯನ್ನು ಮುಗಿಸಿ ಎ. 5ಕ್ಕೆ ವರದಿ ನೀಡಿವೆ.

ಇದನ್ನೂ ಓದಿ Wrestlers Protest: ಫುಟ್ ಪಾತ್​ನಲ್ಲಿ ಮಲಗಿದ ಭಾರತದ ಒಲಿಂಪಿಯನ್​ ಕುಸ್ತಿ ಪಟುಗಳು; ಕಾರಣ ಏನು?

ಸಮಿತಿಗಳು ತಮ್ಮ ವಿಚಾರಣೆಯನ್ನು ಮುಗಿಸಿದ್ದರೂ ಇದುವರೆಗೆ ಅದರ ವರದಿ ಬಹಿರಂಗವಾಗಿಲ್ಲ. ಅದನ್ನಿನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಜತೆಗೆ ಬ್ರಿಜ್​ ಭೂಷಣ್ ಶರಣ್ ಸಿಂಗ್​ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಕುಸ್ತಿಪಟುಗಳು ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ. ಜತೆಗೆ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿರುವುದು ಸಹ ಕಂಡು ಬಂದಿದೆ. ಇದೇ ಕಾರಣಕ್ಕೆ ಬ್ರಿಜ್​ ಭೂಷಣ್ ಶರಣ್ ಸಿಂಗ್​ ಅವರಿಗೆ ಕ್ಲೀನ್‌ಚಿಟ್ ಸಿಗಲಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಮತ್ತೆ ಸಿಡಿದೆದ್ದಿದ್ದಾರೆ.

Exit mobile version