ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರನ್ನು ಪೊಲೀಸರು ಬಂಧಿಸಿ ಸೆರೆಮನೆಗೆ ತಳ್ಳುವ ತನಕ ನಮ್ಮ ಪ್ರತಿಭಟನೆ (Wrestlers Protest) ನಿಲ್ಲುವುದಿಲ್ಲ. ನಮಗೆ ಡೆಲ್ಲಿ ಪೊಲೀಸರ ಮೇಲೆ ಕೊಂಚವೂ ವಿಶ್ವಾಸ ಇಲ್ಲ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್ಭೂಷಣ್ ಸಿಂಗ್ ಅವರನ್ನು ಪೊಲೀಸರು ಬಂಧಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಡೆಲ್ಲಿ ಪೊಲೀಸರು ಶುಕ್ರವಾರ ಸುಪ್ರಿಮ್ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ಪ್ರತಿಭಟನೆ ನಿಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಪ್ರತಿಭಟನಾಕಾರರು ಸಂಜೆ ವೇಳೆ ತಮ್ಮ ನಿರ್ಧಾರ ಪ್ರಕಟಿಸಿದ್ದು ದೂರು ದಾಖಲಾಗಿ ಅವರು ಬ್ರಿಜ್ಭೂಷಣ್ ಬಂಧನಕ್ಕೆ ಒಳಗಾಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಏಷ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್ ಮಾತನಾಡಿ, ಡೆಲ್ಲಿ ಪೊಲೀಸರು ಬ್ರಿಜ್ ಭೂಷಣ್ ಸಿಂಗ್ಗೆ ಅನುಕೂಲ ಆಗುವ ರೀತಿಯಲ್ಲಿ ಎಫ್ಐಆರ್ ದಾಖಲಿಸಿ ಅವರು ಬಚಾವಾಗುವ ರೀತಿ ನೋಡಿಕೊಳ್ಳುತ್ತಾರೆ. ಹೀಗಾಗಿ ಅವರನ್ನು ಬಂಧಿಸುವ ತನಕ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು. ಇದೇ ವೇಳೆ ಅವರು ಪ್ರತಿಭಟನೆ ಮಾಡುತ್ತಿರುವ ನಮಗೆ ಹಾಗೂ ದೂರು ಕೊಟ್ಟಿರುವ ಏಳು ಮಹಿಳಾ ಕುಸ್ತಿಪಟುಗಳಿಗೆ ಭದ್ರತೆ ಹೆಚ್ಚಿಸಬೇಕು ಎಂದು ಕೋರಿದರು.ಬ್ರಿಜ್ಭೂಷಣ್ ಸಹಚರರು ನಮ್ಮ ಮೇಲೆ ದಾಳಿ ಮಾಡುವ ಭಯವಿದೆ ಎಂಬುದಾಗಿಯೂ ತಿಳಿಸಿದರು.
ನಾವು ದೂರು ಕೊಟ್ಟು ಆರು ತಿಂಗಳಾದರೂ ಡೆಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಬ್ರಿಜ್ಭೂಷಣ್ ಸಿಂಗ್ಗೆ ಅನುಕೂಲ ಮಾಡಿಕೊಡುವುದರಲ್ಲಿ ಅನುಮಾನವೇ ಇಲ್ಲ. ಅವರ ಬಗ್ಗೆ ನಾವು ನಂಬಿಕೆ ಕಳೆದುಕೊಂಡಿದ್ದೇವೆ. ಸುಪ್ರಿಮ್ ಕೋರ್ಟ್ ನಮಗೆ ನ್ಯಾಯ ಕೊಡಲಿದೆ ಎಂಬುದಾಗಿ ಅವರು ಹೇಳಿದರು.
ಸಾಕ್ಷಿ ಮಲಿಕ್ ಮಾತನಾಡಿ, ಎಫ್ಐಆರ್ ಮಾಡುತ್ತೇವೆ ಎಂದು ಪೊಲೀಸರು ಹೇಳಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಅವರನ್ನು ಕಂಬಿ ಎಣಿಸುವಂತೆ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಅವರನ್ನು ಬಂಧಿಸಿ, ಲೋಕಸಭಾ ಸ್ಥಾನದಿಂದ ಕಿತ್ತೊಗೆಯುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಆದರೆ, ಅವರು ಪ್ರಭಾವಿ ರಾಜಕಾರಣಿಯಾಗಿರುವ ಕಾರಣ ನಮಗೆ ಜೀವಭಯವಿದೆ ಎಂದು ಹೇಳಿದ್ದಾರೆ.
ಶುಕ್ರವಾರದೊಳಗೆ ಎಫ್ಐಆರ್
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಶುಕ್ರವಾರ ಸಂಜೆಯೊಳಗೆ ಎಫ್ಐಆರ್ ದಾಖಲಿಸಲಾಗುವುದು ಎಂದು ಡೆಲ್ಲಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಈ ಮೂಲಕ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ನಿಶ್ಚಿತ.