Site icon Vistara News

Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

Tokyo Olympics Champion Risako Kawai

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ಕಳೆದ ಸುಮಾರು ಒಂದು ತಿಂಗಳಿನಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್​ ಕುಸ್ತಿಪಟುಗಳಿಗೆ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ರಿಸಾಕೊ ಕವಾಯ್ ಅವರ ಬೆಂಬಲವೊಂದು ದೊರೆತಿದೆ.

ಎರಡು ವಾರಗಳ ಹಿಂದೆ ಕುಸ್ತಿಪಟುಗಳು ತಮ್ಮ ಪ್ರತಿಭಟನೆಗೆ ಬೆಂಬಲಿಸುವಂತೆ ಒಲಿಂಪಿಕ್‌ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ವಿನಂತಿಸಿಕೊಂಡಿದ್ದರು. ಇದೀಗ ಮೂರು ಬಾರಿಯ ವಿಶ್ವ ಚಾಂಪಿಯನ್‌ ಜಪಾನ್‌ನ ರಿಸಾಕೊ ಕವಾಯ್ ಅವರು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ. ಇದರೊಂದಿಗೆ ಕುಸ್ತಿಪಟುಗಳಿಗೆ ಬೆಂಬಲವಾಗಿ ಬಂದ ಮೊದಲ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಕವಾಯ್ ಅವರು ಟೋಕಿಯೊದಲ್ಲಿ ನಡೆದ 57 ಕೆಜಿ ಮಹಿಳಾ ಫ್ರೀಸ್ಟೈಲ್​ನಲ್ಲಿ ಚಿನ್ನ ಗೆದ್ದ ವೇಟ್‌ ಲಿಫ್ಟರ್.

ಕುಸ್ತಿಪಟುಗಳ ಪ್ರತಿಭಟನೆಯ ಕುರಿತು ಬಿಬಿಸಿ ನ್ಯೂಸ್​ನ ವೀಡಿಯೋವನ್ನು ರಿಟ್ವೀಟ್ ಮಾಡುವ ಮೂಲಕ, “ಭಾರತೀಯ ಕ್ರೀಡಾಪಟುಗಳು ಶಾಂತಿಯಿಂದ ಅಭ್ಯಾಸ ನಡೆಸುವ ವಾತಾವರಣ ಶೀಘ್ರದಲ್ಲೇ ಸೃಷ್ಟಿಯಾಗಲಿ” ಎಂದು ಹೇಳುವ ಮೂಲಕ ಕವಾಯ್ ಬೆಂಬಲ ಸೂಚಿಸಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ Wrestlers Protest: ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ,ಯೋಗಿ ಹೆಸರು ಬಳಕೆ; ಬ್ರಿಜ್ ಭೂಷಣ್ ಆರೋಪ

ಇತ್ತೀಚೆಗೆ ಕುಸ್ತಿಪಟುಗಳು ಸಾವಿರಾರು ಪ್ರತಿಭಟನಾಕಾರರ ಬೆಂಬಲದೊಂದಿಗೆ ಇಂಡಿಯಾ ಗೇಟ್‌ ತನಕ ಕ್ಯಾಂಡಲ್ ಮಾರ್ಚ್ ಮಾಡಿದ್ದರು. ಇದೇ ವೇಳೆ ಮಾತನಾಡಿದ್ಧ ವಿನೇಶ್​ ಪೋಗಟ್​ ಇದು ಕೇವಲ ಆರಂಭವಷ್ಟೇ ಅಸಲಿ ಹೋರಾಟ ಇನ್ನು ಮುಂದೆ ಇದೆ ಎಂದು ಹೇಳುವ ಮೂಲಕ ಉಗ್ರ ಹೋರಟದ ಎಚ್ಚರಿಕೆಯನ್ನು ನೀಡಿದ್ದರು.

Exit mobile version