Site icon Vistara News

Wrestlers Protest: ಜೂನ್​ 15ರ ತನಕ ಪ್ರತಿಭಟನೆ ಸ್ಥಗಿತಗೊಳಿಸಿದ ಕುಸ್ತಿಪಟುಗಳು

wrestlers protest

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ಭೂಷನ್​ ಶರಣ್ ಸಿಂಗ್​ ಬಂಧನಕ್ಕೆ ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ತಾತ್ಕಾಲಿಕವಾಗಿ ಈ ಪ್ರತಿಭಟನೆಯಿಂದ ಹಿಂದೆ ಸರಿದ್ದಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರ ನಿವಾಸದಲ್ಲಿ ನಡೆಸಿದ ಸಭೆಯ ಬಳಿಕ ಕುಸ್ತಿಪಟುಗಳು ಜೂನ್​ 15 ತನಕ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಅನುರಾಗ್​ ಠಾಕೂರ್​ ಪ್ರಕಟಿಸಿದ್ದಾರೆ.

ಬುಧವಾರ ಕೇಂದ್ರ ಸರ್ಕಾರ ಕುಸ್ತಿಪಟುಗಳನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸಿತ್ತು. ಇದಕ್ಕೂ ಮುನ್ನ ಅನುರಾಗ್​ ಠಾಕೂರ್​ ಅವರು ತಮ್ಮ ನಿವಾಸದಲ್ಲಿ ಕುಸ್ತಿಪಟುಗಳೊಂದಿಗೆ ಮಹತ್ವದ ಸಭೆಯೊಂದನ್ನು ನಡೆಸಿದ್ದರು. ಇದೀಗ ಸಭೆ ಮುಕ್ತಾಯ ಕಂಡಿದ್ದು ಕುಸ್ತಿ ಪಟುಗಳು ಜೂನ್​ 15ರ ತನಕ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದರ ಜತೆಗೆ ಕುಸ್ತಿಪಟುಗಳು ಕೆಲ ಮಹತ್ವದ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಸಭೆಯ ಬಳಿಕ ಮಾತನಾಡಿದ ಅನುರಾಗ್​ ಠಾಕೂರ್​, ಕುಸ್ತಿಪಟುಗಳ ಎಲ್ಲ ಸಮಸ್ಯೆಯನ್ನು ಆಲಿಸಲಾಗಿದೆ. ಜೂನ್ 15ರೊಳಗೆ ಬ್ರಿಜ್ ಭೂಷಣ್ ವಿರುದ್ಧದ ತನಿಖೆ ಪೂರ್ಣಗೊಳ್ಳಲಿದೆ. ಹೀಗಾಗಿ ಕುಸ್ತಿಪಟುಗಳು ಜೂನ್ 15ರ ವರೆಗೆ ಪ್ರತಿಭಟನೆ ರದ್ದು ಮಾಡಲು ನಿರ್ಧರಿಸಿದ್ದಾರೆ” ಎಂದು ಹೇಳಿದ್ದಾರೆ.

ಸಭೆಯಲ್ಲಿ ಕುಸ್ತಿಪಟುಗಳು ತಮ್ಮ ಮೇಲಿನ ಎಫ್‌ಐಆರ್ ವಾಪಸ್ ಪಡೆಯುವಂತೆ ಮತ್ತು ಜೂನ್ 30ರೊಳಗೆ ನಡೆಯುವ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ 3 ಅವಧಿ ಪೂರೈಸಿರುವ ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಸಹಚರರನ್ನು ಮರು ಆಯ್ಕೆ ಮಾಡದಂತೆ ಒತ್ತಾಯಿಸಿದ್ದಾರೆ. ಜತೆಗೆ ಮಹಿಳಾ ಅಧ್ಯಕ್ಷರನ್ನು ನೇಮಕ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಬಜರಂಗ್​ ಪೂನಿಯ, ಸಚಿವರ ಭರವಸೆಯ ಮೇರೆಗೆ ನಾವು ನಮ್ಮ ಪ್ರತಿಭಟನೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದೇವೆ, ಆದರೆ ನಮ್ಮ ಹೋರಾಟದಿಂದ ಅಲ್ಲ ಎಂದು ಹೇಳಿದ್ದಾರೆ. ಸಾಕ್ಷಿ ಮಲಿಕ್​ ಮಾತನಾಡಿ ತಮ್ಮ ವಿರುದ್ಧ ದಾಖಲಾದ ಎಲ್ಲ ಎಫ್​ಐಆರ್​ಗಳು ಹಿಂಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ Wrestlers Protest: ಅನುರಾಗ್​ ಠಾಕೂರ್​ ಮನೆಗೆ ಭೇಟಿ ನೀಡಿದ ಕುಸ್ತಿಪಟುಗಳು

ಇದಕ್ಕೂ ಮೊದಲು ಜನವರಿಯಲ್ಲಿ ಕುಸ್ತಿಪಟುಗಳ ಜತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸಭೆ ನಡೆಸಿದ್ದರು. ಆ ವೇಳೆ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಇದರಿಂದ ಕುಸ್ತಿಪಟುಗಳು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದರು. ಬಳಿಕ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗಾಗಿ ಭಾರತ ಒಲಿಂ‍‍‍ಪಿಕ್‌ ಸಂಸ್ಥೆಯು ಐಒಎ ಮಹಿಳಾ ಬಾಕ್ಸರ್‌ ಎಂಸಿ ಮೇರಿಕೋಮ್ ಮತ್ತು ಕುಸ್ತಿಪಟು ಯೋಗೇಶ್ವರ್‌ ದತ್‌ ಆರ್ಚರಿ ಸ್ಪರ್ಧಿ ಡೋಲಾ ಬ್ಯಾನರ್ಜಿ ಮತ್ತು ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಅಧ್ಯಕ್ಷ ಸಹದೇವ್‌ ಯಾದವ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. ಇದರ ಪರಿಣಾಮ ಕುಸ್ತಿಪಟುಗಳು ಭರವಸೆ ನೀಡಿದಂತೆ ಕೆಲವು ತಿಂಗಳ ಕಾಲ ಕಾದಿದ್ದರು. ಆದರೆ ಬ್ರಿಜ್​ ಭೂಷಣ್​ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ ಕಾರಣ ಮತ್ತೆ ಪ್ರತಿಭಟನೆ ನಡೆಸಿದ್ದರು. ಇದೀಗ ದ್ವಿತೀಯ ಬಾರಿ ಭರವಸೆ ನೀಡಿರುವ ಅನುರಾಗ್​ ಠಾಕೂರ್ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Exit mobile version