ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ಕಳೆದ 24 ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು(Wrestlers Protest) ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಪ್ರತಿಭಟನೆಗೆ ಬೆಂಬಲಿಸುವಂತೆ ಒಲಿಂಪಿಕ್ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಿದ್ದಾರೆ.
“ಇಷ್ಟು ದಿನ ತಾಳ್ಮೆಯಿಂದ ಪ್ರತಿಭಟನೆ ನಡೆಸಿದರೂ ಯಾವುದೇ ನಾಯ್ಯ ಸಿಗದ ಕಾರಣ, ನಾವು ಈ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಹಲವು ದೇಶಗಳ ಒಲಿಂಪಿಕ್ಸ್ ಪದಕ ವಿಜೇತರು, ಅಂರಾತಾಷ್ಟ್ರೀಯ ಕ್ರೀಡಾಪಟುಗಳನ್ನು ಸಂಪರ್ಕಿಸಲಿದ್ದೇವೆ. ಅವರ ಬೆಂಬಲ ಕೋರಿ ಪತ್ರ ಬರೆಯಲಿದ್ದೇವೆ” ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕುಸ್ತಿಪಟುಗಳು ತಮ್ಮ ಹಣೆಯ ಮೇಲೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವ ವರೆಗೆ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಸದ್ಯ ಕುಸ್ತಿಪಟುಗಳಿಗೆ ಹಲವು ರೈತ ಸಂಘಟನೆಗಳು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ತೊಡಗಿದೆ.
ಬ್ರಿಜ್ ಭೂಷಣ್ ವಿಚಾರಣೆ ನಡೆಸಿದ್ದ ದೆಹಲಿ ಪೊಲೀಸರು
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕಳೆದ ಶುಕ್ರವಾರ ದೆಹಲಿ ಪೊಲೀಸರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನೂ ರಚಿಸಿದ್ದಾರೆ. ಏಳು ಕುಸ್ತಿಪಟುಗಳು ಕಳೆದ ತಿಂಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಬ್ರಿಜ್ ವಿರುದ್ಧ ಫೋಕ್ಸೋ ಕಾಯ್ದೆ ಸೇರಿ 2 ಪ್ರತ್ಯೇಕ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಶುಕ್ರವಾರ ಬ್ರಿಜ್ ಭೂಷಣ್ ಮತ್ತು ಡಬ್ಲ್ಯುಎಫ್ಐ ಸಹಾಯಕ ಕಾರ‍್ಯದರ್ಶಿ ವಿನೋದ್ ತೋಮರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ವಿಚಾರಣೆ ನಡೆಸಿದ ದೆಹಲಿ ಪೊಲೀಸರು
ಈಗಾಗಲೇ ಪ್ರಕರಣದ ತನಿಖೆಯ ವರದಿಯನ್ನು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ತನಿಖೆಗಾಗಿ 4 ಮಹಿಳಾ ಸಿಬ್ಬಂದಿ ಸೇರಿ 10 ಪೊಲೀಸರಿರುವ ವಿಶೇಷ ತಂಡ(ಎಸ್‌ಐಟಿ) ರಚಿಸಲಾಗಿದೆ. ಕುಸ್ತಿಪಟುಗಳ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ದಾಖಲಿಸುವಂತೆ ಸೂಚಿಸಿದ ಪೀಠ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ದೆಹಲಿ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಕರ್ನಾಟಕ, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಹರ್ಯಾಣಕ್ಕೆ ಭೇಟಿ ನೀಡಿವೆ.