ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಈ ಘಟನೆ ನಡೆದ ಬಳಿಕ ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಮತ್ತು ತಾವು ದೇಶಕ್ಕಾಗಿ ಗೆದ್ದ ಪದಕಗಳನ್ನು ಇಂದು(ಮಂಗಳವಾರ) ಹರಿದ್ವಾರದ ಗಂಗಾನದಿಯಲ್ಲಿ ಎಸೆಯುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಇದೇ ವೇಳೆ ಸಂಸತ್ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ನೂಕು ನುಗ್ಗಲು ಉಂಟಾಯಿತು. ವಿನೇಶ್ ಫೋಗಟ್ ಮತ್ತು ಅವರ ಸೋದರಿ ಸಂಗೀತಾ ಫೋಗಟ್ ಒಬ್ಬರ ಮೇಲೊಬ್ಬರು ಬಿದ್ದರು. ಆದರೂ ಅವರನ್ನು ಅತ್ಯಂತ ಅಮಾನುಷವಾಗಿ ರಸೆಯಲ್ಲಿ ಎಳೆದಾಡಿ ಬಂಧಿಸಲಾಗಿತ್ತು. ಪೊಲೀಸರ ಈ ನಡೆಗೆ ಟೋಕೊಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿ ದೇಶದ ಅಗ್ರಮಾನ್ಯ ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು ಖಂಡನೆ ವ್ಯಕ್ತಪಡಿಸಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ Wrestlers Protest : ಕುಸ್ತಿಪಟುಗಳ ಬಂಧನದ ಬಗ್ಗೆ ಒಲಿಂಪಿಕ್ ಸ್ಟಾರ್ ನೀರಜ್ ಚೋಪ್ರಾ ಹೇಳಿದ್ದೇನು?
— Bajrang Punia 🇮🇳 (@BajrangPunia) May 30, 2023
ಈ ಎಲ್ಲ ಘಟನೆ ನಡೆದ ಬಳಿಕ ಮಹತ್ವದ ನಿರ್ಧಾರ ಕೈಗೊಂಡಿರುವ ಕುಸ್ತಿಪಟುಗಳು ಇಂದು(ಮಂಗಳವಾರ) ಸಂಜೆ 6 ಗಂಟೆಗೆ ಪದಕಗಳನ್ನು ಗಂಗಾನದಿಯಲ್ಲಿ ನದಿಯಲ್ಲಿ ವಿಸರ್ಜನೆ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಸುದೀರ್ಘ ಪತ್ರವನ್ನು ಪ್ರಕಟಿಸಿದ್ದಾರೆ. “ಪದಕಗಳನ್ನು ಇಂದು ಸಂಜೆ ಗಂಗಾ ನದಿಗೆ ಎಸೆದ ಬಳಿಕ ಇಂಡಿಯಾ ಗೇಟ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.