Site icon Vistara News

Wrestlers Protest: ಕುಸ್ತಿಪಟುಗಳು ಗಂಗಾ ನದಿಗೆ ಪದಕ ಎಸೆಯುವುದನ್ನು ತಡೆದಿದ್ದು ಯಾರು?

wrestlers protest at haridwar

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಈ ಘಟನೆ ನಡೆದ ಬಳಿಕ ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ದೇಶಕ್ಕಾಗಿ ತಾವ ಗೆದ್ದ ಪದಕಗಳನ್ನು (Medals) ಹರಿದ್ವಾರ ಗಂಗಾ ನದಿಯಲ್ಲಿ (Ganga River) ಮಂಗಳವಾರ ಸಂಜೆ ವಿಸರ್ಜನೆ ಮಾಡುವುದಾಗಿ ಘೋಷೆಣೆ ಮಾಡಿದ್ದರು. ಅದರಂತೆ, ಸಂಜೆ ಮಂಗಳವಾರ ಕುಸ್ತಿ ಪಟುಗಳ ತಮ್ಮ ಪದಕಗಳೊಂದಿಗೆ ಹರಿದ್ವಾರದ ಗಂಗಾ ನದಿಗೆ ಆಗಮಿಸಿದ್ದರು. ಆದರೆ, ರೈತ ನಾಯಕ ನರೇಶ್ ಟಿಕಾಯತ್ ಅವರ ಕುಸ್ತಿ ಪಟುಗಳಿಂದ ಪದಕಗಳನ್ನು ಕಸಿದುಕೊಂಡು, ಎಸೆಯದಂತೆ ತಡೆದಿದ್ದಾರೆ. ಅಲ್ಲದೇ, ಕುಸ್ತಿ ಪಟುಗಳಿಂದ ಐದು ದಿನಗಳ ಕಾಲಾವಕಾಶವನ್ನೂ ಕೂಡ ಕೇಳಿದ್ದಾರೆ.

ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ ಪೂನಿಯಾ, ವಿನೇಶ್ ಪೋಗಟ್, ಸಂಗೀತಾ ಪೋಗಟ್ ಸೇರಿ ಮತ್ತಿತರರು ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ವಿಸರ್ಜಿಸಲು ಸಜ್ಜಾಗಿದ್ದರು. ಈ ಮಧ್ಯೆ, ಗಂಗಾ ಆರತಿ ಸಮಯದಲ್ಲಿ ಪದಕಗಳನ್ನು ವಿಸರ್ಜಿಸಲು ಗಂಗಾ ಆರತಿ ಸಮಿತಿ ಒಪ್ಪಿಗೆ ಕೂಡ ನೀಡಿರಲಿಲ್ಲ. ಈ ಸ್ಥಳವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಪ್ರತಿಭಟನಾ ಕುಸ್ತಿಪಟುಗಳಿಗೆ ಸಮಿತಿ ಹೇಳಿತ್ತು ಎನ್ನಲಾಗಿದೆ.

ಪದಕಗಳನ್ನು ಗಂಗಾ ನದಿಗೆ ಎಸೆಯದಂತೆ ರೈತ ನಾಯಕ ನರೇಶ್ ಟಿಕಾಯತ್ ತಡೆದರು

ಒಲಿಪಿಂಕ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕೂಟಗಳಲ್ಲಿ ಈ ಕುಸ್ತಿ ಪಟುಗಳು ಪದಕ ಗೆದ್ದು ದೇಶದ ಹೆಮ್ಮೆಯಾಗಿದ್ದರು. ಕುಸ್ತಿ ಪಟುಗಳ ಇಂದಿನ ನಡೆಯು ಅಂತಾರಾಷ್ಟ್ರೀಯವಾಗಿ ಭಾರತಕ್ಕೆ ಮುಜಗರ ತರುವ ಸಾಧ್ಯತೆ ಇದೆ.

ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಇದೇ ವೇಳೆ ಸಂಸತ್​ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ನೂಕು ನುಗ್ಗಲು ಉಂಟಾಯಿತು. ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಒಬ್ಬರ ಮೇಲೊಬ್ಬರು ಬಿದ್ದರು. ಆದರೂ ಅವರನ್ನು ಅತ್ಯಂತ ಅಮಾನುಷವಾಗಿ ರಸೆಯಲ್ಲಿ ಎಳೆದಾಡಿ ಬಂಧಿಸಲಾಗಿತ್ತು. ಪೊಲೀಸರ ಈ ನಡೆಗೆ ಟೀಕೊಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ ದೇಶದ ಅಗ್ರಮಾನ್ಯ ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು ಖಂಡನೆ ವ್ಯಕ್ತಪಡಿಸಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ: Wrestlers Protest: ಕುಸ್ತಿ ಪಟುಗಳ ಪ್ರತಿಭಟನೆ ಬಗ್ಗೆ ಗಂಗೂಲಿ ನೀಡಿದ ಹೇಳಿಕೆಗೆ ನೆಟ್ಟಿಗರ ಆಕ್ರೋಶ

Exit mobile version