ಮುಂಬಯಿ: ಮಹತ್ವದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಕಟಗೊಂಡಿವೆ. ಉಭಯ ತಂಡಗಳ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಇದೀಗ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಮೇ ಕೊನೆಯ ವಾರದಲ್ಲಿ ಲಂಡನ್ಗೆ ಪ್ರಯಾಣ ಬೆಳೆಸಲಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಮೂಲಗಳ ಪ್ರಕಾರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದಲ್ಲಿ ಅವಕಾಶ ಪಡೆದ 15 ಆಟಗಾರರು ಮೇ 23 ರಂದು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅಂತಿಮ ಹಂತದಲ್ಲಿ ವಿರಾಟ್ ಕೊಹ್ಲಿ, ಸಿರಾಜ್, ರಾಹುಲ್, ಗಿಲ್ ಸೇರಿ ಅನೇಕ ಆಟಗಾರರು ಐಪಿಎಲ್ನಿಂದ ಹೊರಬೀಳುವ ಸಾಧ್ಯತೆ ಇದೆ. ಹಲವು ವರ್ಷಗಳಿಂದ ಐಪಿಸಿ ಟ್ರೋಪಿಗಳನ್ನು ಗೆಲ್ಲುವಲ್ಲಿ ವಿಫಲವಾಗುತ್ತಿರುವ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯವಾಗಿದೆ. ಕಳೆದ ಬಾರಿ ಕಿವೀಸ್ ವಿರುದ್ಧ ಸೋಲು ಕಂಡಿದ್ದ ಭಾರತ ಈ ಬಾರಿ ಗೆಲ್ಲಲೇ ಬೇಕೆಂಬ ಪಣ ತೊಟ್ಟಿದೆ. ಇದೇ ಕಾರಣಕ್ಕೆ ಪಂದ್ಯ ಆರಂಭಕ್ಕೂ 2 ವಾರ ಮುಂಚಿತವಾಗಿ ಇಂಗ್ಲೆಂಡ್ಗೆ ತೆರಳಿ ಅಲ್ಲಿಯ ವಾತಾವರಣಕ್ಕೆ ಸಿದ್ಧತೆ ಮಾಡುವ ಯೋಜನೆ ಭಾರತ ತಂಡದದ್ದಾಗಿದೆ ಎಂದು ವರದಿಯೊಂದು ತಿಳಿಸಿದೆ.
ಪೂಜಾರ ಈಗಾಗಲೇ ಕೌಂಟಿ ಕ್ರಿಕೆಟ್ ಆಡುವ ಸಲುವಾಗಿ ಇಂಗ್ಲೆಂಡ್ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆದ್ದರೂ ವಿದೇಶದಲ್ಲಿ ಆಸೀಸ್ ತಂಡದ ಸವಾಲನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಸ್ಪೀಡ್ ಪಿಚ್ಗಳಲ್ಲಿ ಆಸೀಸ್ ಉತ್ತಮ ದಾಖಲೆ ಹೊಂದಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕೇರಿ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್, ನಥಾನ್ ಲಿಯೋನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.