ಮುಂಬಯಿ: ಕೆ.ಎಲ್ ರಾಹುಲ್ ಅವರು ಗಾಯದ ಸಮಸ್ಯೆಗೆ ಸಿಲುಕಿ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪೈನಲ್ನಿಂದ(WTC Final 2023) ಹೊರ ಬಿದ್ದ ಬೆನ್ನಲ್ಲೇ ಇದೀಗ ಅವರ ಸ್ಥಾನಕ್ಕೆ ಬಿಸಿಸಿಐ ಬದಲಿ ಆಟಗಾರನನ್ನು ಆಯ್ಕೆ ಮಾಡಿದೆ. ಯುವ ಆಟಗಾರ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಈ ವಿಚಾರವನ್ನು ಬಿಸಿಸಿಐ ಸೋಮವಾರ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಜತೆಗೆ ಸ್ಟ್ಯಾಂಡ್ ಬೈ ಆಟಗಾರರಾಗಿ ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಬಲ ತೊಡೆಯ ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಅವರು ಮೈದಾನ ತೊರೆದಿದ್ದರು. ಗಾಯದ ಸ್ವರೂಪ ಗಂಭೀರವಾದ ಕಾರಣ ಅವರು ಸದ್ಯದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಅವರು ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದರು.
ರಾಹುಲ್ ಅವರು ವಿಶ್ವ ಟೆಸ್ಟ್ ಫೈನಲ್ ಪಂದ್ಯದಿಂದ ಹೊರಬಿದ್ದ ತಕ್ಷಣ ಅವರ ಸ್ಥಾನಕ್ಕೆ ಪ್ರಸಕ್ತ ಐಪಿಎಲ್ನಲ್ಲಿ ಪ್ರಚಂಡ ಬ್ಯಾಟಿಂಗ್ ಮತ್ತು ಕೀಪಿಂಗ್ ನಡೆಸುತ್ತಿರುವ ಹಿರಿಯ ಆಟಗಾರ ವೃದ್ಧಿಮಾನ್ ಸಾಹಾ ಅವರು ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ಯುವ ಆಟಗಾರ ಇಶಾನ್ ಕಿಶನ್ಗೆ ಮಣೆ ಹಾಕಿದೆ. ಇನ್ನೊಂದೆಡೆ ಫೈನಲ್ ಪಂದ್ಯಕ್ಕೆ ನೇಮಕವಾಗಿದ್ದ ಉಮೇಶ್ ಯಾದವ್ ಮತ್ತು ಜಯ್ದೇವ್ ಉನಾದ್ಕತ್ ಅವರು ಕೂಡ ಗಾಯಗೊಂಡಿದ್ದು ಮುನ್ನೆಚ್ಚರಿಕ ಕ್ರಮವಾಗಿ ಬಿಸಿಸಿಐ ಮೂವರು ಆಟಗಾರರನ್ನು ಸ್ಟ್ಯಾಂಡ್ ಬೈ ಆಗಿ ಆಯ್ಕೆ ಮಾಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಇದೀಗ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಮೇ ಕೊನೆಯ ವಾರದಲ್ಲಿ ಲಂಡನ್ಗೆ ಪ್ರಯಾಣ ಬೆಳೆಸಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ WTC 2023: ಮೇ ಅಂತಿಮ ವಾರದಲ್ಲಿ ಭಾರತ ತಂಡ ಲಂಡನ್ ಪ್ರಯಾಣ; ಐಪಿಎಲ್ಗೆ ಸ್ಟಾರ್ ಆಟಗಾರರ ಅಲಭ್ಯ ಸಾಧ್ಯತೆ
ಪರಿಷ್ಕೃತ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್ದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಸ್ಟ್ಯಾಂಡ್ ಬೈ ಆಟಗಾರರು: ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.