ಲಂಡನ್: ಮಧ್ಯಮ ಕ್ರಮಾಂಕದ ಆಟಗಾರ ಟ್ರಾವಿಸ್ ಹೆಡ್ ಅವರು ಬಾರಿಸಿದ ಅಜೇಯ ಶತಕದ ನೆರವಿನಿಂದ ಭಾರತದ ಎದುರಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 300 ರನ್ಗಳ ಗಡಿ ದಾಟಿದೆ. ಈ ಮೂಲಕ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದೆ.
ಲಂಡನ್‌ನ ಅತ್ಯಂತ ಪುರಾತನವೂ ಆದ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತದ ಹೊರತಾಗಿಯೂ ಮೊದಲ ದಿನದಾಟದಲ್ಲಿ 85 ಓವರ್ಗೆ ಮೂರು ವಿಕೆಟ್ ಕಳೆದುಕೊಂಡು 327 ರನ್ ಬಾರಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಮೊಹಮ್ಮದ್ ಸಿರಾಜ್ ಅವರು ದೊಡ್ಡ ಆಘಾತವಿಕ್ಕಿದರು. ಅಪಾಯಕಾರಿ ಬ್ಯಾಟರ್ ಎನಿಸಿಕೊಂಡ ಉಸ್ಮಾನ್ ಖವಾಜ ಅವರು ಖಾತೆ ತೆರೆಯುವ ಮುನ್ನವೇ ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಮೇಲುಗೈ ಸಾಧಿಸಿದರು. ಆದರೆ ದ್ವಿತೀಯ ವಿಕೆಟ್ಗೆ ಜತೆಯಾದ ಮಾರ್ನಸ್ ಲಬುಶೇನ್ ಮತ್ತು ಡೇವಿಡ್ ವಾರ್ನರ್ ಆಧಾರವಾಗಿ ನಿಂತು ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಈ ಜೋಡಿ ಕೆಲ ಕಾಲ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉತ್ತಮ ರನ್ ಒದಗಿಸಿಕೊಟ್ಟರು. ದ್ವಿತೀಯ ವಿಕೆಟ್ಗೆ 69 ರನ್ಗಳ ಉಪಯುಕ್ತ ಜತೆಯಾಟ ನಡೆಸಿತು. 43 ರನ್ ಗಳಿಸಿದ ವೇಳೆ ವಾರ್ನರ್ ಅವರು ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪತನದ ಬೆನ್ನಲೇ ಭೋಜನ ವಿರಾಮ ಮುಗಿಸಿ ಬಂದ ಲಬುಶೇನ್ ಅವರು ಮೊಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್ ತಂಡ 76 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಲಬುಶೇನ್ ಗಳಿಕೆ 26 ರನ್.
ತಂಡ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದ ವೇಳೆ ಬ್ಯಾಟಿಂಗ್ ನಡೆಸಲು ಕ್ರೀಸ್ಗೆ ಬಂದ ಟ್ರಾವಿಸ್ ಹೆಡ್ ಅವರು ಭಾರತ ಬಿಗು ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಆದರೆ ಇದು ಅವರ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲಾದ 6ನೇ ಶತಕವಾಗಿದೆ. ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಬ್ಯಾಟಿಂಗ್ ರಾಕ್ಷಸ ಎಂದೇ ಕರೆಯಲ್ಪಡುವ ಸ್ಟೀವನ್ ಸ್ಮಿತ್ ಕೂಡ ಅರ್ಧಶತಕ ಬಾರಿಸಿ ಮಿಂಚಿದರು.
ಇದನ್ನೂ ಓದಿ WTC Final 2023: ಭಾರತ ವಿರುದ್ಧ ವಿಶ್ವ ದಾಖಲೆ ಬರೆದ ಟ್ರಾವಿಸ್ ಹೆಡ್
Stumps on Day 1 🏏
— ICC (@ICC) June 7, 2023
Indian bowlers were made to toil as Travis Head and Steve Smith put Australia in control 👊
Follow the #WTC23 Final 👉 https://t.co/wJHUyVnX0r pic.twitter.com/29K7u7rcPR
ಉಭಯ ಆಟಗಾರರ ಈ ಅಜೇಯ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತ ದಾಖಲಿಸಿದೆ. ಸದ್ಯ ಸ್ಮಿತ್ ಅವರು 95 ರನ್, ಹೆಡ್ 146 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದ್ವಿತೀಯ ದಿನದಾಟದಲ್ಲಿ ಭಾರತೀಯ ಬೌಲರ್ಗಳು ಇವರನ್ನು ಬೇಗನೆ ಔಟ್ ಮಾಡದೇ ಹೋದರೆ ಭಾರತಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಶಮಿ, ಸಿರಾಜ್, ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರು ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ. ಅದರಲ್ಲೂ ಶಾರ್ದೂಲ್ ಅವರು ನೋ ಬಾಲ್ ಎಸೆಯುವುದನ್ನು ಕಡಿಮೆ ಮಾಡಬೇಕಿದೆ. ಮೊದಲ ದಿನ ಅವರು 4 ನೋ ಬಾಲ್ ಎಸೆದಿದ್ದಾರೆ.