ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯುವ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(World Test Championship Final) ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. 15 ಸದಸ್ಯರ ಈ ತಂಡದಲ್ಲಿ ಹಿರಿಯ ಆಟಗಾರ ಅಜಿಂಕ್ಯ ರಹಾನೆಗೆ ಅವಕಾಶ ನೀಡಲಾಗಿದೆ. ಆದರೆ ಬೆನ್ನು ನೋವಿನಿಂದ ಚೇತರಿಕೆ ಕಾಣುತ್ತಿರುವ ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಭಾರತ ಮತ್ತು ಆಸೀಸ್ ವಿರುದ್ಧದ ಈ ಫೈನಲ್ ಪಂದ್ಯ ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ.
15 ತಿಂಗಳ ಬಳಿಕ ರಾಷ್ಟ್ರೀಯ ತಂಡ ಸೇರಿದ ರಹಾನೆ
ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರಹಾನೆ ಅವರನ್ನು ಫೈನಲ್ ತಂಡಕ್ಕೆ ಸೇರಿಸಲಾಗಿದೆ. ರಹಾನೆ ಅವರು 15 ತಿಂಗಳ ಬಳಿಕ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಗಾಯಗೊಂಡ ವೇಳೆ ಮತ್ತು ಸೂರ್ಯಕುಮಾರ್ ಯಾದವ್ ಅವರು ಕಳಪೆ ಬ್ಯಾಟಿಂಗ್ ಫಾರ್ಮ್ ಅನುಭವಿಸಿದ್ದಾಗಲೇ ರಹಾನೆ ಅವರ ಹೆಸರು ಕೇಳಿ ಬಂದಿತ್ತು. ಜತೆಗೆ ಅವರಿಗೆ ವಿದೇಶದಲ್ಲಿ ಆಡಿದ ಅನುಭವ ಕೂಡ ಇರುವುದರಿಂದ ಈ ಮಹತ್ವದ ಟೂರ್ನಿಗೆ ಅವರಿಗೆ ಅವಕಾಶ ನೀಡಲಾಗುವುದು ಎಂದು ವರಿಯಾಗಿತ್ತು. ಇದೀಗ ನಿರೀಕ್ಷೆಯಂತೆ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಸದ್ಯ ರಹಾನೆ ಅವರು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದು ಪ್ರತಿ ಪಂದ್ಯದಲ್ಲಿಯೂ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ಬರ ಅನುಭವಿಸಿ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದ ಕೆ.ಎಲ್. ರಾಹುಲ್ ಅವರಿಗೂ ಸ್ಥಾನ ಸಿಕ್ಕಿದೆ. ಪಂತ್ ಅನುಪಸ್ಥಿತಿಯಲ್ಲಿ ಶ್ರೀಕರ್ ಭರತ್ ವಿಕೆಟ್ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ. ಆದರೆ ತಂಡದಲ್ಲಿ ರಾಹುಲ್ ಕೂಡ ಇರುವ ಕಾರಣ ಯಾರಿಗೆ ಕೀಪಿಂಗ್ ಅವಕಾಶ ಸಿಗಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ WTC Final 2023: ಭಾರತದ ಎದುರಿನ ಟೆಸ್ಟ್ ವಿಶ್ವಕಪ್ ಫೈನಲ್ಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
ಬೌಲಿಂಗ್ನಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜೈದೇವ್ ಉನಾದ್ಕತ್ ಕಾಣಿಸಿಕೊಂಡಿದ್ದಾರೆ. ಉಮೇಶ್ ಯಾದವ್ಗೂ ಅವಕಾಶ ಸಿಕ್ಕೆದೆ. ಸೂರ್ಯಕುಮಾರ್ ಅವರನ್ನು ಕೈಬಿಡಲಾಗಿದೆ. ಕಳೆದ ಬಾರಿ ಭಾರತ ಫೈನಲ್ ಪ್ರವೇಶಿಸಿದ್ದರೂ ಇಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕಳಪೆ ಪ್ರದರ್ಶನ ತೋರಿ ಪ್ರಶಸ್ತಿ ವಂಚಿತವಾಗಿತ್ತು. ಆದರೆ ಈ ಬಾರಿ ತಮ್ಮ ಪ್ರಶಸ್ತಿ ಕೊರಗನ್ನು ನೀಗಿಸಿಕೊಂಡೀತೇ ಎಂಬುದು ಈ ಪಂದ್ಯದ ಕೌತುಕ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.