ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯದಲ್ಲಿ ಅಜಿಂಕ್ಯ ರಹಾನೆ(Ajinkya Rahane) ಹಾಗೂ ಶಾರ್ದೂಲ್ ಠಾಕೂರ್(Shardul Thakur) ಬಾರಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 296 ರನ್ ಗಳಿಸಿ ಆಲೌಟ್ ಆಗಿದೆ. ಆಸ್ಟ್ರೇಲಿಯಾ 173 ರನ್ಗಳ ಮುನ್ನಡೆ ಗಳಿಸಿ ದ್ವಿತೀಯ ಇನಿಂಗ್ಸ್ ಆರಂಭಿಸಿದೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಆಸರೆಯಾಗಿ ನಿಂತು ತಂಡವನ್ನು ದೊಡ್ಡ ಕುಸಿತದಿಂದ ಪಾರು ಮಾಡಿದ ರಹಾನೆ ಅವರು ನೂತನ ಮೈಲುಗಲ್ಲು ಮತ್ತು ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು.
ಎರಡನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್‌ಗೆ 151 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಮೊದಲ ಓವರ್ನಲ್ಲಿಯೇ ಭರತ್ ಅವರ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಈ ವೇಳೆ ಜತೆಯಾದ ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ ಆಸೀಸ್ ಬೌಲಿಂಗ್ ದಾಳಿಗೆ ತಡೆಯೊಡ್ಡಿ 7ನೇ ವಿಕೆಟ್‌ಗೆ 109 ರನ್ ಒಟ್ಟುಗೂಡಿಸಿ ತಂಡಕ್ಕೆ ಆಸರೆಯಾದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು.
129 ಬಾಲ್ ಎದುರಿಸಿದ ರಹಾನೆ 11 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿ 89 ರನ್ಗೆ ವಿಕೆಟ್ ಒಪ್ಪಿಸಿದರು. 70 ರನ್ ಗಳಿಸಿದ ವೇಳೆ ಅವರು ತಮ್ಮ ಟೆಸ್ಟ್ ಬಾಳ್ವೆಯಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದರು. ಈ ಮೂಲಕ ಐದು ಸಾವಿರ ರನ್ ಪೂರೈಸಿದ ಭಾರತದ 13ನೇ ಆಟಗಾರನಾಗಿ ಮೂಡಿಬಂದರು. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯೊಂದನ್ನು ಬರೆದರು.
ರಹಾನೆಗೆ ಉತ್ತಮ ಸಾಥ್ ನೀಡಿದ ಶಾರ್ದೂಲ್ ಠಾಕೂರ್ ಅವರು ಕೈಗೆ ಹಲವು ಬಾರಿ ಚೆಂಡಿನ ಏಟು ತಿಂದರೂ ನೋವನ್ನು ಸಹಿಸಿಕೊಂಡು ಅರ್ಧಶತಕ ಬಾರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾದರು. 109 ಎಸೆತ ಎದುರಿಸಿದ ಅವರು 6 ಬೌಂಡರಿ ನೆರವಿನಿಂದ 51 ರನ್ ಗಳಿಸಿದರು. ಇದು ಅವರು ಓವೆಲ್ನಲ್ಲಿ ಗಳಿಸಿದ ಮೂರನೇ ಅರ್ಧಶತಕ ಮತ್ತು ವೈಯಕ್ತಿಕ ನಾಲ್ಕನೇ ಅರ್ಧಶತಕವಾಗಿದೆ.
ಇದನ್ನೂ ಓದಿ WTC Final 2023: ಟ್ರೋಲ್ಗಳಿಗೆ ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ
5000 Test runs and going strong 💪💪
— BCCI (@BCCI) June 9, 2023
Keep going, @ajinkyarahane88 #TeamIndia pic.twitter.com/VixAtmYrRK
ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯಾ ರಹಾನೆ ಅವರು 7ನೇ ವಿಕೆಟ್‌ಗೆ 100 ರನ್ ಜತೆಯಾಟವಾಡಿದ ವೇಳೆ ಇಂಗ್ಲೆಂಡ್‌ನಲ್ಲಿ ಭಾರತ ಏಳನೇ ಅಥವಾ ಅದಕ್ಕಿಂತ ಕಡಿಮೆ ವಿಕೆಟ್‌ಗೆ ಆರನೇ ಶತಕದ ಜತೆಯಾಟ ನಡೆಸಿದ ದಾಖಲೆ ಬರೆಯಿತು. ಸಾರಸ್ಯವೆಂದರೆ ಈ ಎರಡು ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಅವರು ಭಾಗಿಯಾಗಿದ್ದರು. 2021 ರಲ್ಲಿ ಓವಲ್‌ನಲ್ಲಿ ಎರಡನೇ ಇನಿಂಗ್ಸ್ನಲ್ಲಿ ರಿಷಭ್ ಪಂತ್ ಅವರೊಂದಿಗೆ ಠಾಕೂರ್ 100 ರನ್ಗಳ ಜತೆಯಾಟ ನಡೆಸಿದ್ದರು.