ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಶಾರ್ದೂಲ್ ಠಾಕೂರ್(Shardul Thakur) ಅವರು ಕ್ರಿಕೆಟ್ ದಿಗ್ಗಜರಿಬ್ಬರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರಹಾನೆ ಜತೆ ಸೇರಿಕೊಂಡು ತಂಡಕ್ಕೆ ಉತ್ತಮ ಜತೆಯಾಟ ನಡೆಸಿದ ಶಾರ್ದೂಲ್ ಠಾಕೂರ್ ಅರ್ಧಶತಕ ಬಾರಿಸಿದ ವೇಳೆ ದಾಖಲೆಯೊಂದನ್ನು ಬರೆದರು. ಓವಲ್ ಮೈದಾನಲ್ಲಿ ಮೂರು ಅರ್ಧಶತಕ ಬಾರಿಸಿದ ಮೂರನೇ ವಿದೇಶಿ ಆಟಗಾರನಾಗಿ ಮೂಡಿಬಂದರು. ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಅಲೆನ್ ಬಾರ್ಡರ್(Allan Border) ಮತ್ತು ಸರ್ ಡಾನ್ ಬ್ರಾಡ್ಮನ್(Sir Don Bradman) ದಾಖಲೆಯನ್ನು ಸರಿಗಟ್ಟಿದ್ದರು. ಉಭಯ ಆಟಗಾರರು ಕೂಡ ಈ ಮೈದಾನಲ್ಲಿ ಮೂರು ಅರ್ಧಶತಕ ಬಾರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇದು ಶಾರ್ದೂಲ್ ಅವರ ಎರಡನೇ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಅವರು ಎರಡೂವರೆ ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದರು. 2021ರಲ್ಲಿ ಶಾರ್ದೂಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ (57) ಮತ್ತು ಎರಡನೇ ಇನಿಂಗ್ಸ್ನಲ್ಲಿ (60) ರನ್ ಬಾರಿಸಿದ್ದರು. ಒಟ್ಟಾರೆ ಇದು ಅವರ ಟೆಸ್ಟ್ ಬಾಳ್ವೆಯ ನಾಲ್ಕನೇ ಅರ್ಧಶತಕವಾಗಿದೆ. ಇನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹಿರಿಮೆಗೂ ಅವರು ಪಾತ್ರರಾದರು. ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಆಗಿದ್ದಾರೆ.
ಈ ಪಂದ್ಯ ಮೊದಲ ಇನಿಂಗ್ಸ್ನಲ್ಲಿ 109 ಎಸೆತ ಎದುರಿಸಿದ ಶಾರ್ದೂಲ್ 6 ಬೌಂಡರಿ ನೆರವಿನಿಂದ 51 ರನ್ ಗಳಿಸಿದರು. ಕ್ಯಾಮರೂನ್ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. ಮೊದಲ ಇನಿಂಗ್ಸ್ನಲ್ಲಿ ಬೌಲಿಂಗ್ನಲ್ಲಿಯೂ ಮಿಂಚಿದ ಅವರು 2 ವಿಕೆಟ್ ಉಡಾಯಿಸಿದರು.
ಇದನ್ನೂ ಓದಿ WTC Final 2023: ಕೊಹ್ಲಿಯನ್ನು ಹೊಗಳಿ ರೋಹಿತ್ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಸ್ಟಾರ್ ನಟಿ!
ಜತೆಯಾಟದಲ್ಲಿಯೂ ದಾಖಲೆ ಬರೆದ ಶಾರ್ದೂಲ್
ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯಾ ರಹಾನೆ ಅವರು 7ನೇ ವಿಕೆಟ್‌ಗೆ 100 ರನ್ ಜತೆಯಾಟವಾಡಿದ ವೇಳೆ ಇಂಗ್ಲೆಂಡ್‌ನಲ್ಲಿ ಭಾರತ ಏಳನೇ ಅಥವಾ ಅದಕ್ಕಿಂತ ಕಡಿಮೆ ವಿಕೆಟ್‌ಗೆ ಆರನೇ ಶತಕದ ಜತೆಯಾಟ ನಡೆಸಿದ ದಾಖಲೆ ಬರೆಯಿತು. ಸಾರಸ್ಯವೆಂದರೆ ಈ ಎರಡು ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಅವರು ಭಾಗಿಯಾಗಿದ್ದರು. 2021 ರಲ್ಲಿ ಓವಲ್‌ನಲ್ಲಿ ಎರಡನೇ ಇನಿಂಗ್ಸ್ನಲ್ಲಿ ರಿಷಭ್ ಪಂತ್ ಅವರೊಂದಿಗೆ ಠಾಕೂರ್ 100 ರನ್ಗಳ ಜತೆಯಾಟ ನಡೆಸಿದ್ದರು.