ಲಂಡನ್: ಭಾರತ ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದ ದ್ವಿತೀಯ ದಿನ ಸ್ಟೀವನ್ ಸ್ಮಿತ್(Steven smith) ಅವರು ಭರ್ಜರಿ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಹಲವು ಕ್ರಿಕೆಟ್ ದಿಗ್ಗಜರ ದಾಖಲೆಯನ್ನು ಮುರಿದಿದ್ದಾರೆ.
ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 95 ರನ್ಗಳಿಂದ ದ್ವಿತೀಯ ದಿನದಾಟ ಮುಂದುವರಿಸಿದ ಸ್ಮಿತ್ ಅವರು ಸಿರಾಜ್ ಎಸೆದ ಮೊದಲ ಓವರ್ನಲ್ಲೇ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಶತಕ ಪೂರ್ತಿಗೊಳಿಸಿದರು. ಈ ವೇಳೆ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಮ್ಯಾಥ್ಯೂ ಹೇಡನ್ ನಾಲ್ಕನೇ ಸ್ಥಾನಕ್ಕೆ ಕುಸಿದರು. ಇದು ಸ್ಮಿತ್ ಅವರ 31 ಟೆಸ್ಟ್ ಶತಕವಾಗಿದೆ. ರಿಕಿ ಪಾಂಟಿಂಗ್ 41 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಸ್ಟೀವ್ ವಾ (32) ದ್ವಿತೀಯ ಸ್ಥಾನದಲ್ಲಿದ್ದಾರೆ.
ಭಾರತ ಪರ ಅತಿ ಹೆಚ್ಚು ಶತಕ
ಭಾರತದ ವಿರುದ್ಧ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ ಸ್ಮಿತ್ ಜಂಟಿಯಾಗಿ ಮೊದಲ ಸ್ಥಾನ ಸಂಪಾದಿಸಿದರು. ಇದಕ್ಕೂ ಮುನ್ನ ಜೋ ರೂಟ್ ಅವರು 9 ಶತಕ ಸಿಡಿಸಿ ಅಗ್ರಸ್ಥಾನ ಪಡೆದಿದ್ದರು. ಇದೀಗ ಸ್ಮಿತ್ ಕೂಡ ಭಾರತ ವಿರುದ್ಧ ಒಂಬತ್ತು ಶತಕ ಬಾರಿಸಿ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ ರಿಕಿ ಪಾಂಟಿಂಗ್ ಮತ್ತು ವಿವಿಯನ್ ರಿಚರ್ಡ್ ಅವರು ಭಾರತ ವಿರುದ್ಧ ತಲಾ ಎಂಟು ಟೆಸ್ಟ್ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ WTC Final 2023: ಭಾರತ ವಿರುದ್ಧ ವಿಶ್ವ ದಾಖಲೆ ಬರೆದ ಟ್ರಾವಿಸ್ ಹೆಡ್
ದ್ರಾವಿಡ್ ದಾಖಲೆ ಮುರಿದ ಸ್ಮಿತ್
ಈ ಶತಕದ ಮೂಲಕ ಸ್ಮಿತ್ ಅವರು ಇಂಗ್ಲೆಂಡ್ ನೆಲದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಈ ಮೂಲಕ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ದ್ರಾವಿಡ್ 6 ಶತಕ ಬಾರಿಸಿದ್ದರು. ಸ್ಮಿತ್ ಅವರದ್ದು ಇದು 7ನೇ ಶತಕವಾಗಿದೆ. ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್ ಅಗ್ರಸ್ಥಾನ ಪಡೆದಿದ್ದಾರೆ. ಅವರು 11 ಶತಕ ಬಾರಿಸಿದ್ದಾರೆ. ಆ ಬಳಿಕದ ಸ್ಥಾನದಲ್ಲಿ 7 ಶತಕ ಗಳಿಸಿದ ಸ್ಟೀವ್ ವಾ ಕಾಣಿಸಿಕೊಂಡಿದ್ದಾರೆ.