Site icon Vistara News

WTC Final 2023: ಲಂಡನ್​ನ ಬಸ್​ನಲ್ಲೇ ಐಪಿಎಲ್​ ಫೈನಲ್​ ವೀಕ್ಷಿಸಿದ ಟೀಮ್​ ಇಂಡಿಯಾ

mohammed siraj watch ipl final match

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇತ್ತಂಡಗಳ ಈ ಪ್ರಶಸ್ತಿ ಸಮರ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಭಾರತ ತಂಡ ಎರಡು ಬ್ಯಾಚ್​ನಲ್ಲಿ ಲಂಡನ್​ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಇದರ ಮಧ್ಯೆ ಆಟಗಾರರು ಐಪಿಎಲ್​ ಪಂದ್ಯ ವೀಕ್ಷಿಸಿದ ಫೋಟೊಗಳು ಇದೀಗ ವೈರಲ್​ ಆಗಿದೆ.

ಟೀಮ್​ ಇಂಡಿಯಾದ ಆಟಗಾರರಾದ ವಿರಾಟ್​ ಕೊಹ್ಲಿ, ಮೊಹಮ್ಮದ್ ಸಿರಾಜ್​, ಉಮೇಶ್​ ಯಾದವ್​, ಅಕ್ಷರ್​ ಪಟೇಲ್​ ಸೇರಿ ಹಲವು ಆಟಗಾರರು, ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಸಿಬ್ಬಂದಿಗಳು ಅಭ್ಯಾಸಕ್ಕೆ ತೆರಳುವ ಬಸ್​ನಲ್ಲಿ ಚೆನ್ನೈ ಮತ್ತು ಗುಜರಾತ್​ ವಿರುದ್ಧ ನಡೆದ ಅತ್ಯಂತ ರೋಚಕ ಫೈನಲ್​ ಪಂದ್ಯವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಈ ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ “ಪ್ರದರ್ಶನ ಮೊದಲ್ಗೊಂಡಿದೆ” ಎಂದು ಕ್ಯಾಪ್ಷನ್​ ನೀಡಿದೆ.

ಕಠಿಣ ಅಭ್ಯಾಸ ನಡೆಸುತ್ತಿರುವ ಟೀಮ್​ ಇಂಡಿಯಾ

ಈ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿ, ಮೊಹಮ್ಮದ್‌ ಸಿರಾಜ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಶಾರ್ದೂಲ್ ಠಾಕೂರ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌ ಮತ್ತು ಚೇತೇಶ್ವರ್​ ಪೂಜಾರ ಅವರು ಮೊದಲ ಬ್ಯಾಚ್​ನಲ್ಲಿ ಲಂಡನ್​ಗೆ ಆಗಮಿಸಿ ಅಭ್ಯಾಸ ನಡೆಸಿದ್ದರು. ಸೋಮವಾರ ತಂಡದ ನಾಯಕ ರೋಹಿತ್​ ಶರ್ಮ, ಯಶಸ್ವಿ ಜೈಸ್ವಾಲ್​, ಸೂರ್ಯಕುಮಾರ್​ ಯಾದವ್​ ಮತ್ತು ಇಶಾನ್​ ಕಿಶನ್ ಅವರು ತಂಡ ಸೇರಿದ್ದರು. ಫೈನಲ್​ ಪಂದ್ಯದಲ್ಲಿ ಆಡಿದ ರಹಾನೆ, ಜಡೇಜಾ, ಗಿಲ್​, ಮೊಹಮ್ಮದ್​ ಶಮಿ ಮತ್ತು ಶ್ರೀಕರ್​ ಭರತ್​ ಅವರು ಮಂಗಳವಾರ ಲಂಡನ್​ಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ IPL 2023: ಧೋನಿ ಐಪಿಎಲ್​ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೆಹವಾಗ್; ಏನದು?

ಚಾಂಪಿಯನ್​ ಪಟ್ಟ ಅಲಂಕರಿಸಿದ ಚೆನ್ನೈ

ಅತ್ಯಂತ ರೋಚಕವಾಗಿ ಸೋಮವಾರ ನಡೆದ ಫೈನಲ್​ ಪಂದ್ಯದಲ್ಲಿ ಕಡೇಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರು ಸಿಕ್ಸರ್​ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಟ್ರೋಫಿ ಗೆಲ್ಲುವ ಮೂಲಕ ಚೆನ್ನೈ ತಂಡ ಮುಂಬೈ ದಾಖಲೆಯನ್ನು ಸರಿಗಟ್ಟಿತು. ರೋಹಿತ್​ ಪಡೆಯೂ 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

ವಿಶ್ವ ಟೆಸ್ಟ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್​ದೇವ್​ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​). ಸ್ಟ್ಯಾಂಡ್‌ ಬೈ ಆಟಗಾರರು: ಯಶಸ್ವಿ ಜೈಸ್ವಾಲ್​, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

Exit mobile version