ಮುಂಬಯಿ: ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯಕ್ಕೆ ದಿನಗಣೆ ಆರಂಭವಾಗಿದೆ. ಜೂನ್ 7 ರಿಂದ 11ರವರೆಗೆ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಜಯ್ದೇವ್ ಉನಾದ್ಕತ್ ಅವರು ಗಾಯದಿಂದ ಚೇತರಿಕೊಂಡಿದ್ದು ಮುಂದಿನ ವಾರದಿಂದ ಬೌಲಿಂಗ್ ಅಭ್ಯಾಸ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಈ ಮಧ್ಯೆ ಎಡಗೈ ವೇಗಿ ಉನಾದ್ಕತ್ ಕೂಡ ಐಪಿಎಲ್ ಆಡುವ ವೇಳೆ ಗಾಯಗೊಂಡಿದ್ದರು. ಸದ್ಯ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದು ಮುಂದಿನ ವಾರದಿಂದ ಬೌಲಿಂಗ್ ಅಭ್ಯಾಸ ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಅವರು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲಿಗೆ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸ್ಟ್ಯಾಂಡ್‌ಬೈ ಆಟಗಾರರಾಗಿ ಮುಖೇಶ್ ಕುಮಾರ್ ಅವರನ್ನು ಬೌಲಿಂಗ್ ವಿಭಾಗಕ್ಕೆ, ಬ್ಯಾಟಿಂಗ್ ವಿಭಾಗಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿಗೆ ಒಳಗಾಗಿರುವ ಉನಾದ್ಕತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಉಮೆಶ್ ಯಾದವ್ ಅವರು ಆಡುವ ಬಗ್ಗೆ ಇನ್ನು ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
“ಉನಾದ್ಕತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಅವರು ಪ್ರಸ್ತುತ ಎನ್‌ಸಿಎಯಲ್ಲಿ ತಮ್ಮ ಪುನರ್ವಸತಿಗೆ ಒಳಗಾಗಿದ್ದಾರೆ. ಸೋಮವಾರದಿಂದ ಬೌಲಿಂಗ್ ಅಭ್ಯಾಸ ನಡೆಸಲಿದ್ದಾರೆ” ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ WTC Final 2023 : ಇಶಾನ್ ಕಿಶನ್ ಆಯ್ಕೆಗೆ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲ, ಏನಂದರು ಅವರು?
ವಿಶ್ವ ಟೆಸ್ಟ್ ಫೈನಲ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್) ಸ್ಟ್ಯಾಂಡ್‌ಬೈ ಆಟಗಾರರು: ಋತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.