ಲಂಡನ್: ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವಕಪ್ ಚಾಂಪಿಯನ್(WTC Final 2023) ಯಾರು ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ. ಸದ್ಯ ಭಾರತ 4ನೇ ದಿನನಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಗೆಲುವಿಗೆ ಇನ್ನೂ 280 ರನ್ ಅಗತ್ಯವಿದೆ. ಇದೀಗ ಎಲ್ಲರ ಕುತೂಹಲವೆಂದರೆ ಒಂದೊಮ್ಮೆ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಆಗ ಯಾರು ವಿಜೇತರಾಗಲಿದ್ದಾರೆ(wtc final 2023 draw who will win) ಎನ್ನುವುದು.
ಐಸಿಸಿ ಈ ಟೂರ್ನಿ ಆರಂಭಿಸಿದ ವೇಳೆಯೇ ಎಲ್ಲ ರೀತಿಯ ನಿಯಮಗಳನ್ನು ಅಚ್ಚುಕಟ್ಟಾಗಿ ರೂಪಿಸಿದೆ. ಅಂತಿಮ ಕ್ಷಣದಲ್ಲಿ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡಬಾರದೆಂದು ಎಲ್ಲ ನಿಯಮವನ್ನು ಪ್ರಕಟಿಸಿತ್ತು. ಅದರಂತೆ ಮಳೆ ಬಂದು ನಾಲ್ಕು ಗಂಟೆಯ ಆಟಕ್ಕೆ ಅಡಚಣೆಯಾದರೆ ಇದನ್ನು ಮೀಸಲು ದಿನದಲ್ಲಿ ಸರಿದೂಗಿಸಲಾಗುವುದು. ಇನ್ನು ಡ್ರಾಗೊಂಡರೆ ಇತ್ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಮಳೆಯಿಂದ ಪಂದ್ಯ ಸಂಪೂರ್ಣ ರದ್ದಾದಾರು ಕೂಡ ಇದೇ ನಿಯಮ ಇಲ್ಲಿ ಅನ್ವಯವಾಗಲಿದೆ.
ಯಾರೇ ಗೆದ್ದರೂ ವಿಶ್ವ ದಾಖಲೆ
ಈ ಟೆಸ್ಟ್ ಪಂದ್ಯವನ್ನು ಯಾರೇ ಗೆದ್ದರೂ ಇತಿಹಾಸವೊಂದು ಸೃಷ್ಟಿಯಾಗಲಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದಿವೆ. ಹೀಗಾಗಿ ಟೆಸ್ಟ್ ವಿಶ್ವಕಪ್ ಗೆದ್ದರೆ ಈ ಮೂರು ಮಾದರಿಯ ವಿಶ್ವ ಕಪ್ ಗೆದ್ದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಈ ತಂಡ ಯಾವುದು ಎಂಬುದು ಸದ್ಯದ ಕುತೂಹಲ.
ಇದನ್ನೂ ಓದಿ WTC Final 2023: 44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ
ಭಾರತ ಗೆಲುವಿಗೆ 280 ಬಾಕಿ
444 ರನ್ನುಗಳ ಕಠಿಣ ಗುರಿ ಪಡೆದ ಭಾರತ 4ನೇ ದಿನನಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಮಾಡಿದೆ. ಗೆಲುವಿಗೆ ಇನ್ನೂ 280 ರನ್ ಅಗತ್ಯವಿದೆ. ಸದ್ಯ ವಿರಾಟ್ ಕೊಹ್ಲಿ(44*) ಮತ್ತು ಅಜಿಂಕ್ಯ ರಹಾನೆ(20*) ರನ್ಗಳಿಸಿ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ. ಇದಕ್ಕೂ ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ನಾಯಕ ರೋಹಿತ್ ಶರ್ಮ-ಶುಭಮನ್ ಗಿಲ್ ಬಿರುಸಿನ ಆರಂಭ ಒದಗಿಸಿದ್ದರು.