ಅಹಮದಾಬಾದ್: ಭಾನುವಾರ ಹೊತ್ತು ಮುಳುಗುತ್ತಿದ್ದಂತೆಯೇ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 16ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಈ ಚುಟುಕು ಕ್ರಿಕೆಟಿನ ಮಹಾ
ಕದನವೊಂದನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಇದೀಗ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೊಂದು ದಟ್ಟವಾಗಿದೆ.
ಅಹಮದಾಬಾದ್ನಲ್ಲಿ ಸದ್ಯ ಮೋಡ ಕವಿದ ವಾತಾವರಣ ಕಂಡುಬಂದಿದೆ. ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಅಧಿಕ ಎಂದು ಇಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಒಂದೊಮ್ಮೆ ಮಳೆ ಬಂದರೆ ಪಂದ್ಯದ ಗತಿ ಏನಾಗಲಿದೆ ಎಂಬ ಮಾಹಿತಿ ಇಂತಿದೆ.
ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ಆರಂಭದಲ್ಲಿ ಓವರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡದೆಯೇ ರಾತ್ರಿ 10.10 ರವರೆಗೆ ಕಾದು ಪಂದ್ಯ ಆರಂಭಿಸಬಹುದು. ಒಂದು ವೇಳೆ ಈ ಸಮಯ ಕಳೆದ ಬಳಿಕವೂ ಮಳೆ ಬಂದರೆ ಆಗ ಅಂತಿಮ ಸಮಯ 12.26 ಆಗಿರುತ್ತದೆ. ಈ ವೇಳೆ ತಲಾ ಐದು ಓವರ್‌ಗಳ ಪಂದ್ಯ ನಡೆಯಲಿದೆ. ಇಲ್ಲಿ ಯಾವುದೇ ಬ್ರೇಕ್ ಇರುವುದಿಲ್ಲ.
ಒಂದೊಮ್ಮೆ ಪಂದ್ಯ ಅರ್ಧಕ್ಕೆ ನಿಂತರೇ ಆಗ ಅದು ಮೀಸಲು ದಿನದಂದು ಪೂರ್ಣಗೊಳ್ಳುತ್ತದೆ. ಹಿಂದಿನ ದಿನ ನಿಲ್ಲಿಸಿದ ಹಂತದಿಂದ ಪಂದ್ಯ ಪುನರಾರಂಭವಾಗುತ್ತದೆ. ಒಂದು ವೇಳೆ ಮೀಸಲು ದಿನದಂದು ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ 5-ಓವರ್‌ಗಳ ಪಂದ್ಯವನ್ನೂ ಪೂರ್ಣಗೊಳಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಫಲಿತಾಂಶ ಪಡೆಯಲು ಸೂಪರ್ ಓವರ್ ಆಡಲಾಗುತ್ತದೆ. ಆದರೆ ತಂಡಗಳು ಅನುಮತಿಸಿದರೆ ಮಾತ್ರ. ಅಂದರೆ ಪಿಚ್ ಮತ್ತು ಮೈದಾನ ಆಟಕ್ಕೆ ಸಿದ್ಧವಾಗಿರಬೇಕು ಆದ್ದರಿಂದ ಇಂತಹ ಸಂದರ್ಭದಲ್ಲಿ ಸೂಪರ್ ಓವರ್ 1.20 ಕ್ಕೆ ಪ್ರಾರಂಭವಾಗುತ್ತದೆ.
ಇದನ್ನೂ ಓದಿ IPL 2023 : ಶುಭಮನ್ ಗಿಲ್ ಬಗ್ಗೆ ಕಪಿಲ್ ದೇವ್ ಹೇಳಿದ ಕ್ರಿಕೆಟ್ ಭವಿಷ್ಯವೇನು?
ಒಂದು ವೇಳೆ ಮೀಸಲು ದಿನದಂದೂ ಸೂಪರ್ ಓವರ್ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ಆಗ ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಗಳಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಈ ಅದೃಷ್ಟ ಗುಜರಾತ್ ತಂಡಕ್ಕೆ ಒಲಿಯಲಿದೆ. ಸದ್ಯ ಅಭಿಮಾನಿಗಳು ಈ ಪಂದ್ಯಕ್ಕೆ ಮಳೆ ಕಾಡದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.