Site icon Vistara News

Yashasvi Jaiswal: ಜೈಸ್ವಾಲ್ ಸಿಕ್ಸರ್​ಗೆ ಇಂಗ್ಲೆಂಡ್ ಡಗೌಟ್​ನ ಕುರ್ಚಿ ಪೀಸ್​ ಪೀಸ್‌

Jaiswal SIX

ರಾಜ್​ಕೋಟ್​: ಇಂಗ್ಲೆಂಡ್(India vs England 3rd Test)​ ವಿರುದ್ಧದ ಮೂರನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಅಮೋಘ ಆಟವಾಡಿದ ಯಶಸ್ವಿ ಜೈಸ್ವಾಲ್​(Yashasvi Jaiswal) ಭರ್ಜರಿ ಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಇದೀಗ ಅವರು ಬಾರಿಸಿದ ಸಿಕ್ಸರ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದೆ. ಹೌದು, ಜೈಸ್ವಾಲ್​ ಬಾರಿಸಿದ ಸಿಕ್ಸರ್​ಗೆ ಕುರ್ಚಿಯೊಂದು ತುಂಡಾಗಿದೆ. ಈ ಕುರ್ಚಿಯ ಫೋಟೊ ವೈರಲ್(Video Goes Viral)​ ಆಗಿದೆ.

ಜೈಸ್ವಾಲ್​ 133 ಎಸೆತಗಳಿಂದ 104 ಗಳಿಸಿದ ವೇಳೆ ಬೆನ್ನು ನೋವಿನ ಕಾರಣದಿಂದ ಆಟದಿಂದ ನಿವೃತ್ತರಾದರು. ನಾಲ್ಕನೇ ದಿನದಾಟದಲ್ಲಿ ಅವರು ಬ್ಯಾಟಿಂಗ್​ಗೆ ಇಳಿಯುವ ಸಾಧ್ಯತೆ ಇದೆ. ಮೂರನೇ ದಿನದಾಟದಲ್ಲಿ ಅತ್ಯಂತ ಬಿರುಸಿನ ಬ್ಯಾಟಿಂಗ್​ ನಡೆಸಿದ ಜೈಸ್ವಾಲ್​ 5 ಸಿಕ್ಸರ್​ ಮತ್ತು 9 ಬೌಂಡರಿ ಬಾರಿಸಿ ಮಿಂಚಿದರು. ಇದರಲ್ಲಿ ರೆಹಾನ್ ಅಹ್ಮದ್ ಬೌಲ್ ಮಾಡಿದ 31ನೇ ಓವರ್‌ನ ಮೊದಲ ಎಸೆತದಲ್ಲಿ ಜೈಸ್ವಾಲ್ ಬಾರಿಸಿದ ಸಿಕ್ಸರ್ ಇಂಗ್ಲೆಂಡ್‌ನ ಡಗೌಟ್‌ಗೆ ಹಾನಿಯನ್ನುಂಟು ಮಾಡಿತು. ಸಿಕ್ಸರ್​ ಬಾರಿಸಿದ ಚೆಂಡು ಇಂಗ್ಲೆಂಡ್‌ನ ಡಗೌಟ್​ನಲ್ಲಿದ್ದ ಕುರ್ಚಿಗೆ ಬಿದ್ದಿದೆ. ಚೆಂಡು ಬಿದ್ದ ರಭಸಕ್ಕೆ ಕುರ್ಚಿ 2 ತುಂಡಾಗಿದೆ.

ಅಜೇಯ ಶತಕ ಬಾರಿಸಿ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್ ಸದ್ಯ 2024ರ ಸಾಲಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಜೈಸ್ವಾಲ್​ಗೂ ಮುನ್ನ ಅಗ್ರ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ಅನುಭವಿ ಆಟಗಾರ ಕೇನ್​ ವಿಲಿಯಮ್ಸನ್​ ಕಾಣಿಸಿಕೊಂಡಿದ್ದರು. ವಿಲಿಯಮ್ಸನ್ ಈ ವರ್ಷದಲ್ಲಿ ​ 6 ಇನಿಂಗ್ಸ್​ ಆಡಿ 486 ರನ್​ ಕಲೆಹಾಕಿದ್ದಾರೆ. ಇದೀಗ ಜೈಸ್ವಾಲ್​ 10 ಇನಿಂಗ್ಸ್​ನಿಂದ 535 ರನ್​ ಬಾರಿಸಿ ಅಗ್ರಸ್ಥಾನ ಪಡೆದಿದ್ದಾರೆ. ವಿಲಿಯಮ್ಸನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 11 ಇನಿಂಗ್ಸ್​ ಆಡಿ 416 ರನ್​ ಬಾರಿಸಿರುವ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರು ಮೂರನೇ ಸ್ಥಾನದಲ್ಲಿದ್ದಾರೆ.

ಜೈಸ್ವಾಲ್ ಶತಕದ ಬಳಿಕ ಇಂಗ್ಲೆಂಡ್ ವಿರುದ್ಧದ ಹಾಲಿ ಸರಣಿಯಲ್ಲಿ 400 ರನ್​ಗಳ ಗಡಿ ದಾಟಿದರು. ಅಲ್ಲದೆ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಂತರ 400ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜೈಸ್ವಾಲ್ 104 ರನ್ ಗಳಿಸಿದ್ದಾಗ ಬೆನ್ನು ನೋವಿನ ಸಮಸ್ಯೆ ಉಂಟಾಯಿತು. ದಿನದಾಟದ 8 ಓವರ್ ಗಳು ಬಾಕಿ ಇರುವಾಗ ಜೈಸ್ವಾಲ್ ಬೆನ್ನುನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ಎಡಗೈ ಆರಂಭಿಕ ಆಟಗಾರ ಉತ್ತಮ ಫಾರ್ಮ್​ನಲ್ಲಿದ್ದರು. ಫಿಸಿಯೊ ಅವರಿಗೆ ನೋವು ನಿವಾರಕಗಳನ್ನು ನೀಡಿದರು. ಆದರೆ ಅದು ಪರಿಣಾಮಕಾರಿ ಎಂದು ತೋರಲಿಲ್ಲ.. ಮುಂದಿನ ಓವರ್​ ಬಳಿಕ ವಾಪಸ್ ನಡೆದರು.

Exit mobile version