Site icon Vistara News

Yashasvi Jaiswal: ಜೈಸ್ವಾಲ್​ ಮುಟ್ಟಿದ್ದೆಲ್ಲ ಚಿನ್ನ; ದಿಗ್ಗಜರ ಹಲವು ದಾಖಲೆಗಳಿಗೆ ಕನ್ನ!

Yashasvi Jaiswal brought up his second Test century

ಧರ್ಮಶಾಲಾ: ಭಾರತ ಕ್ರಿಕೆಟ್​ ತಂಡದ ಭವಿಷ್ಯದ ಧ್ರುವತಾರೆ ಎಂದು ಗುರುತಿಸಲ್ಪಟ್ಟ ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರು ಪಂದ್ಯದಿಂದ ಪಂದ್ಯಕ್ಕೆ ಹಲವು ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದ್ದಾರೆ. ಈ ಯುವ ಎಡಗೈ ಬ್ಯಾಟರ್​ನ ಬ್ಯಾಟಿಂಗ್​ ಅಬ್ಬರಕ್ಕೆ ಹಲವು ದಿಗ್ಗಜ ಆಟಗಾರರ ದಾಖಲೆ ಪತನಗೊಂಡಿದೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​ನಲ್ಲಿಯೂ ಜೈಸ್ವಾಲ್​ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಈ ದಾಖಲೆಗಳ ಪಟ್ಟಿ ಇಂತಿದೆ.

ಸಾವಿರ ರನ್​ ಪೂರ್ತಿಗೊಳಿಸಿದ ಜೈಸ್ವಾಲ್​


28 ರನ್​ ಗಳಿಸುತ್ತಿದ್ದಂತೆ ಜೈಸ್ವಾಲ್​(22 ವರ್ಷ 70 ದಿನ) ಟೆಸ್ಟ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ 4ನೇ ಅತ್ಯಂತ ಕಿರಿಯ ಭಾರತೀಯ ಆಟಗಾರ ಎನಿಸಿದರು. ದಾಖಲೆ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್​ ಈ ಮೈಲಿಗಲ್ಲನ್ನು 19 ವರ್ಷ 217 ದಿನ ಇರುವಾಗ ನಿರ್ಮಿಸಿದ್ದರು. ಕಡಿಮೆ ಇನಿಂಗ್ಸ್​ನಲ್ಲಿ ಸಾವಿರ ರನ್​ ಪೂರೈಸಿದ ಸಾಧಕರ ಪಟ್ಟಿಯಲ್ಲಿ ಜೈಸ್ವಾಲ್​ ಅವರು ಚೇತೇಶ್ವರ ಪೂಜಾರ ಅವರ ದಾಖಲೆಯನ್ನು ಮುರಿದಿದ್ದಾರೆ. ಪೂಜಾರ ಸಾವಿರ ರನ್​ ಗಳಿಸಲು 18 ಇನಿಂಗ್ಸ್ ​ತೆಗೆದುಕೊಂಡರೆ, ಜೈಸ್ವಾಲ್​ ಕೇವಲ 16 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ. ವಿನೋದ್​ ಕಾಂಬ್ಲಿ ಮೊದಲಿಗ. ಅವರು 14 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ.​

ಸಚಿನ್ ಸಿಕ್ಸರ್​​ ದಾಖಲೆ ಪತನ


ಜೈಸ್ವಾಲ್​ ಅವರು ಶೋಯೆಬ್ ಬಶೀರ್ ಅವರ ಓವರ್​ನಲ್ಲಿ ಮೂರು ಸಿಕ್ಸರ್​ ಬಾರಿಸುತ್ತಿದ್ದಂತೆ ಕ್ರಿಕೆಟ್​ ದೇವರು, ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಸಿಕ್ಸರ್​ ದಾಖಲೆಯೊಂದು ಪತನಗೊಂಡಿತು. ತಂಡವೊಂದರ ವಿರುದ್ಧ ಅತಿ ಹೆಚ್ಚು ಟೆಸ್ಟ್​ ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಇದುವರೆಗೆ ಸಚಿನ್​ ಹೆಸರಿನಲ್ಲಿತ್ತು. ಸಚಿನ್​ ಅವರು ಆಸ್ಟ್ರೇಲಿಯಾ ವಿರುದ್ಧ 74 ಇನಿಂಗ್ಸ್​ ಆಡಿ ​25 ಸಿಕ್ಸರ್​ ಬಾರಿಸಿದ್ದರು. ಆದರೆ ಜೈಸ್ವಾಲ್​ ಕೇವಲ 9 ಇನಿಂಗ್ಸ್​ ಮೂಲಕ ಇಂಗ್ಲೆಂಡ್​ ವಿರುದ್ಧ 26* ಸಿಕ್ಸರ್​ ಬಾರಿಸಿ ಸಚಿನ್​ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್​ ಶರ್ಮ ಅವರು 22* ಸಿಕ್ಸರ್​ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಒಂದೊಮ್ಮೆ ರೋಹಿತ್​ ನಾಲ್ಕು ಸಿಕ್ಸರ್​ ಬಾರಿಸಿದರೆ ಸಚಿನ್​ ಹಿಂದಿಕ್ಕಿ ದ್ವಿತೀಯ ಸ್ಥಾನಕೇರಲಿದ್ದಾರೆ.

ಇದನ್ನೂ ಓದಿ IND vs ENG 5th Test: ಕುಲ್​ದೀಪ್​, ಅಶ್ವಿನ್ ಸ್ಪಿನ್ ದಾಳಿಗೆ ಕುಸಿದ ಇಂಗ್ಲೆಂಡ್​

ಕೊಹ್ಲಿಯ 2 ದಾಖಲೆ ಪತನ


ಜೈಸ್ವಾಲ್ ಅವರು​ 38 ರನ್​ ಬಾರಿಸುತ್ತಿದ್ದಂತೆ ಟೆಸ್ಟ್​ ಸರಣಿಯೊಂದರಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದರು. ವಿರಾಟ್​ ಕೊಹ್ಲಿ 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ 692 ರನ್​ ಬಾರಿಸಿದ್ದರು. ಇದೀಗ ಈ ಮೊತ್ತವನ್ನು ಜೈಸ್ವಾಲ್(712*)​ ಮೀರಿ ನಿಂತಿದ್ದಾರೆ. ಇದು ಮಾತ್ರವಲ್ಲದೆ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ದಾಖಲೆಯಲ್ಲಿಯೂ ವಿರಾಟ್​ ಕೊಹ್ಲಿಯನ್ನು ಜೈಸ್ವಾಲ್​ ಹಿಂದಿಕ್ಕಿದ್ದಾರೆ. 2016ರಲ್ಲಿ ನಡೆದಿದ್ದ ತವರಿನ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ 655 ರನ್​ ಬಾರಿಸಿದ್ದರು. ಇದೀಗ ಜೈಸ್ವಾಲ್​ 681* ರನ್​ ಬಾರಿಸಿ ಈ ದಾಖಲೆಯನ್ನು ಮುರಿದಿದ್ದಾರೆ.

ಆಂಗ್ಲರ ಆಕ್ರಮಣಕಾರಿ ಬಾಜ್​ ಬಾಲ್ ಶೈಲಿಯಲ್ಲೇ ಬ್ಯಾಟಿಂಗ್​ ನಡೆಸಿದ ಜೈಸ್ವಾಲ್ 58 ಎಸೆತಗಳಿಂದ 57 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ಅವರ ಈ ಬಿರುಸಿನ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 3 ಸಿಕ್ಸರ್​ ಮತ್ತು 5 ಬೌಂಡರಿ ದಾಖಲಾಯಿತು. ಮೂರು ಸಿಕ್ಸರ್​ ​ಶೋಯೆಬ್ ಬಶೀರ್ ಅವರ ಒಂದೇ ಓವರ್​ನಲ್ಲಿ ಸಿಡಿಯಿತು. ರೋಹಿತ್​ ಜತೆಗೂಡಿ ಮೊದಲ ವಿಕೆಟ್​ಗೆ 104 ರನ್​ ಒಟ್ಟುಗೂಡಿಸಿದರು.

Exit mobile version