ಧರ್ಮಶಾಲಾ: ಶುಕ್ರವಾರ ರಾತ್ರಿ ಇಲ್ಲಿ ನಡೆದ ಐಪಿಎಲ್(IPL 2023) ಟೂರ್ನಿಯ 66ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿತು. ಇದೇ ಪಂದ್ಯದಲ್ಲಿ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು 15 ವರ್ಷಗಳ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.
ಪಂಜಾಬ್ ಕಿಂಗ್ಸ್ ನೀಡಿದ ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟುವ ವೇಳೆ ಯಶಸ್ವಿ ಜೈಸ್ವಾಲ್ ಅವರು 41 ರನ್ ಗಳಿಸುತ್ತಿದ್ದಂತೆ ಶಾನ್ ಮಾರ್ಷ್ ಅವರ ದಾಖಲೆಯೊಂದನ್ನು ಮುರಿದರು. ಐಪಿಎಲ್ ಆವೃತ್ತಿಯೊಂದರಲ್ಲಿ ಅನ್ಕ್ಯಾಪ್ಡ್ ಆಟಗಾರನಾಗಿ ಅತ್ಯಧಿಕ ಮೊತ್ತ ಗಳಿಸಿದ ಆಟಗಾರ ಎಂಬ ಹಿರಿಮೆಗೆ ಜೈಸ್ವಾಲ್ ಪಾತ್ರರಾದರು. ಈ ಮೂಲಕ 15 ವರ್ಷಗಳ ಹಿಂದಿನ ದಾಖಲೆಯೊಂದು ಪತನಗೊಂಡಿತು.
2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಟಗಾರ ಶಾನ್ ಮಾರ್ಷ್(shaun marsh) ಅವರು 616 ರನ್‌ಗಳೊಂದಿಗೆ ಈ ದಾಖಲೆ ನಿರ್ಮಿಸಿದ್ದರು. ಇದೀಗ ಜೈಸ್ವಾಲ್ 625 ರನ್‌ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ರಣಜಿ, ಐಪಿಎಲ್ ಸೇರಿದಂತೆ ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಜೈಸ್ವಾಲ್ ಅವರನ್ನು ಟೀಮ್ ಇಂಡಿಯಾದ ಬರವಸೆಯ ಆಟಗಾರ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಎಡಗೈ ಆಟಗಾರನಾಗಿರುವ ಕಾರಣ ಭಾರತ ತಂಡಕ್ಕೂ ಉತ್ತಮ ಆಯ್ಕೆಯಾಗಬಹುದು. ಧವನ್ ಬಳಿಕ ಯಾವುದೇ ಎಡಗೈ ಆರಂಭಿಕ ಬ್ಯಾಟರ್ ಭಾರತ ತಂಡಕ್ಕೆ ಬಂದಿಲ್ಲ. ಈ ಸ್ಥಾನವನ್ನು ಜೈಸ್ವಾಲ್ ತುಂಬುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2023: ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಪಂದ್ಯ ಗೆದ್ದ ರಾಜಸ್ಥಾನ್
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಗೆಲುವು ಸಾಧಿಸಿತು.