ಬೆಂಗಳೂರು: ಚೊಚ್ಚಲ ವಿಶ್ವಕಪ್ ಆಡುವ ಕನಸಿನಲ್ಲಿದ್ದ ಟೀಮ್ ಇಂಡಿಯಾದ ಸ್ಟಾರ್ ಯುವ ಬ್ಯಾಟರ್ ಶುಭಮನ್ ಗಿಲ್ ಅವರು ಟೂರ್ನಿಯಿಂದ ಹೊರಬೀಳುವುದು ಖಚಿತ ಎಂದು ತಿಳಿದುಬಂದಿದೆ. ಅಲ್ಲದೆ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಋತುರಾಜ್ ಗಾಯಕ್ವಾಡ್(ruturaj gaikwad) ಅಥವಾ ಯಶಸ್ವಿ ಜೈಸ್ವಾಲ್(yashasvi jaiswal) ಅವರನ್ನು ಆಯ್ಕೆ ಮಾಡಲಾಗುವುದು ಎಂದು ವರದಿಯಾಗಿದೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಗಿಲ್ ಅವರು ಮಂಗಳವಾರ ಚೆನ್ನೈಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪ್ಲೇಟ್ಲೆಟ್ ಕುಸಿದಿತ್ತು. ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದರೂ ಅವರಿಗೆ ಪದೇಪದೆ ಆರೋಗ್ಯ ಏರುಪೇರು ಕಾಣಿಸುತ್ತಿದೆ ಎಂದು ಬಿಸಿಸಿಐ ವೈದ್ಯಕೀಯ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಚೇತರಿಕೆಗೆ ಇನ್ನೂ 2 ವಾರಗಳ ಕಾಲಾವಕಾಶ ಬೇಕಾಗಿರುವ ಕಾರಣ ಅವರನ್ನು ವಿಶ್ವಕಪ್ ಟೂರ್ನಿಯಿಂದ ಕೈ ಬಿಡುವ ಯೋಜನೆ ರೂಪಿಸಲಾಗಿದೆ ಎಂದು ವರದಿಯಾಗಿದೆ.
ಜೈಸ್ವಾಲ್-ಗಾಯಕ್ವಾಡ್
ಶುಭಮನ್ ಗಿಲ್ ಅವರ ಬದಲಿಗೆ ಜೈಸ್ವಾಲ್ ಮತ್ತು ಗಾಯಕ್ವಾಡ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಗಾಯಕ್ವಾಡ್ ಮತ್ತು ಜೈಸ್ವಾಲ್ ಕಳೆದ ವಾರ ಮುಕ್ತಾಯ ಕಂಡ ಏಷ್ಯನ್ ಗೇಮ್ಸ್ ಕ್ರಿಕೆಟ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಜೈಸ್ವಾಲ್ ಶತಕವನ್ನು ಬಾರಿಸಿ ಮಿಂಚಿದ್ದರು. ಮೂಲಗಳ ಪ್ರಕಾರ ಜೈಸ್ವಾಲ್ ಆಯ್ಕೆ ಖಚಿತ ಎನ್ನಲಾಗಿದೆ.
ಜೈಸ್ವಾಲ್ ಆರಂಭಿಕ ಹಾಗೂ ಎಡಗೈ ಆಟಗಾರನಾಗಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಕೂಡ ಆಗಿರುವ ಕಾರಣ ಅವರಿಗೆ ಸ್ಥಾನ ಸಿಗುವುದು ಖಚಿತ ಎಂದು ವರದಿಯಾಗಿದೆ. ಸದ್ಯ ಗಿಲ್ ಸ್ಥಾನದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಗಾಯಗೊಂಡರೆ ಆಗ ಬ್ಯಾಕ್ ಅಪ್ ಕೀಪರ್ ಆಗಿ ಜೈಸ್ವಾಲ್ ಇರಲಿದ್ದಾರೆ. ಗಾಯಕ್ವಾಡ್ ಆಯ್ಕೆ ಕಷ್ಟ ಏಕೆಂದರೆ ಅವರು ಬ್ಯಾಟರ್ ಪಾತ್ರವನ್ನು ಮಾತ್ರ ನಿಭಾಯಿಸಬಲ್ಲರು.
ಇದನ್ನೂ ಓದಿ Shubman Gill: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಗಿಲ್; ದೂರವಾದ ತಂಡದ ಆತಂಕ
ಡೆಂಗ್ಯೂ ಜ್ವರದ ಕಾರಣ ಗಿಲ್ ಆಸ್ಟ್ರೇಲಿಯಾ(IND vs AUS) ವಿರುದ್ಧದ ಪಂದ್ಯದಿಂದ ಹೊರಗುಳಿದ್ದರು. ಅವರ ಬದಲು ಎಡಗೈ ಆಟಗಾರ ಇಶಾನ್ ಕಿಶನ್ಗೆ(Ishan Kishan) ಅವಕಾಶ ನೀಡಲಾಗಿತ್ತು. ಮುಂದಿನ ಪಂದ್ಯಕ್ಕೆ ಅವರು ತಂಡ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಸೋಮವಾರ ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ಗಿಲ್ ಅಫಘಾನಿಸ್ತಾನ ವಿರುದ್ಧದ ದ್ವಿತೀಯ ಪಂದ್ಯವನ್ನೂ ಆಡುವುದಿಲ್ಲ ಎಂದು ತಿಳಿಸಿತ್ತು.
ಉತ್ತಮ ಫಾರ್ಮ್ನಲ್ಲಿದ್ದ ಗಿಲ್
ಶುಭಮನ್ ಗಿಲ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದರು. ಏಷ್ಯಾ ಕಪ್ನಲ್ಲಿ ಶತಕ ಮತ್ತು ಅರ್ಧಶತಕ ಬಾರಿಸಿ ಒಟ್ಟು 302 ರನ್ ಗಳಿಸಿ ಪ್ರಚಂಡ ಬ್ಯಾಟಿಂಗ್ ನಿರ್ವಹಣೆ ತೋರಿದ್ದರು. ವಿಶ್ವಕಪ್ನಲ್ಲಿಯೂ ಅವರ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟಿತ್ತು. ಆದರೆ ದುರಾದೃಷ್ಟಕ್ಕೆ ಅವರಿಗೆ ಡೆಂಗ್ಯೂ ಬಾಧಿಸಿ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್ನಲ್ಲಿ 890 ರನ್ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ಕೆಲವು ಇನಿಂಗ್ಸ್ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ. ಈಗಾಗಲೇ ಒಂದು ದ್ವಿಶತಕವನ್ನು ಕೂಡ ಬಾರಿಸಿದ್ದಾರೆ.