ಹ್ಯಾಂಗ್‌ಝೌ: ಭಾರತ ಕ್ರಿಕೆಟ್ ತಂಡದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್(Yashasvi Jaiswal) ಏಷ್ಯನ್ ಗೇಮ್ಸ್(Asian Games 2023)ನಲ್ಲಿ ಶತಕ ಬಾರಿಸುವ ಮೂಲಕ ಶುಭಮನ್ ಗಿಲ್ ಅವರ ದಾಖಲೆಯೊಂದನ್ನು ಮುರಿಸಿದ್ದಾರೆ. ಜೈಸ್ವಾಲ್ ಶತಕದ ನೆರೆವಿನಿಂದ ಟೀಮ್ ಇಂಡಿಯಾ ನೇಪಾಳ(India vs Nepal, Quarter Final) ವಿರುದ್ಧ 23ರನ್ಗಳ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.
ಇಲ್ಲಿನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಫುಲ್ ಜೋಶ್ನಿಂದಲೇ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿ ಸಿಕ್ಸರ್, ಬೌಂಡರಿಯ ಮಳೆಯನ್ನೇ ಸುರಿಸಿದರು. ಅವರ ಬ್ಯಾಟಿಂಗ್ ಆರ್ಭಟಕ್ಕೆ ನೇಪಾಳ ಬೌಲರ್ಗಳು ಬಳಲಿ ಬೆಂಡಾದರು. ಕೇವಲ 49 ಎಸೆತಗಳಿಂದ ಶತಕವನ್ನು ಪೂರ್ತಿಗೊಳಿಸಿದರು. ಇದೇ ವೇಳೆ ಗಿಲ್ ಹೆಸರಿನಲ್ಲಿದ್ದ ದಾಖಲೆ ಪತನಗೊಂಡಿತು.
ಜೈಸ್ವಾಲ್ ಈ ಶತಕದಿಂದ ಅತಿ ಕಿರಿಯ ವಯಸ್ಸಿನಲ್ಲಿ ಟಿ20 ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಗಿಲ್ ಹೆಸರಿನಲ್ಲಿತ್ತು. ಗಿಲ್(23 ವರ್ಷ ಮತ್ತು 146 ದಿನ) ಇದೇ ವರ್ಷ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಯಲ್ಲಿ ಅಜೇಯ 126 ರನ್ ಬಾರಿಸಿದ್ದರು. ಇದೀಗ ಜೈಸ್ವಾಲ್(21 ವರ್ಷ ಒಂಬತ್ತು ತಿಂಗಳು ಮತ್ತು 13 ದಿನ) ಈ ದಾಖಲೆಯನ್ನು ಮುರಿದ್ದಾರೆ. ಇದು ಜೈಸ್ವಾಲ್ ಅವರ ಚೊಚ್ಚಲ ಟಿ20 ಶತಕವಾಗಿದೆ.
ಇದನ್ನೂ ಓದಿ Asian Games 2023: ನೇಪಾಳ ವಿರುದ್ಧ 23 ರನ್ ಗೆಲುವು; ಸೆಮಿಗೆ ಲಗ್ಗೆಯಿಟ್ಟ ಟೀಮ್ ಇಂಡಿಯಾ
8ನೇ ಭಾರತೀಯ
ಭಾರತ ಪರ ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ 8ನೇ ಆಟಗಾರ ಎಂಬ ಹಿರಿಮೆಗೂ ಜೈಸ್ವಾಲ್ ಪಾತ್ರರಾದರು. ಇದಕ್ಕೂ ಮುನ್ನ ಶುಭಮ್ ಗಿಲ್, ವಿರಾಟ್ ಕೊಹ್ಲಿ,, ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಮತ್ತು ಸುರೇಶ್ ರೈನಾ ಟಿ20ಯಲ್ಲಿ ಶತಕ ಬಾರಿಸಿದ್ದರು.
ಜೈಸ್ವಾಲ್ ಅವರ ಬ್ಯಾಟಿಂಗ್ ಆರ್ಭಟದ ವೇಳೆ 74 ರನ್ಗಳು ಬೌಂಡರಿ ಮತ್ತು ಸಿಕ್ಸರ್ ಮೂಲಕವೇ ದಾಖಲಾಯಿತು. ಒಟ್ಟು 8 ಬೌಂಡರಿ ಮತ್ತು 7 ಸಿಕ್ಸರ್ ಸಿಡಿಯಿತು. ಭರ್ತಿ 100 ರನ್ಗಳಿಸಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಕಳೆದ ವಿಂಡೀಸ್ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯಲ್ಲಿಯೂ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಸಿಕ್ಕ ಎಲ್ಲ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಅವರು ವಿಶ್ವಕಪ್ ಮುಗಿದ ಬಳಿಕ ಭಾರತ ತಂಡದಲ್ಲಿ ಖಾಯಂ ಆಗಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಕೆಲ ಹಿರಿಯ ಆಟಗಾರರು ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸಿದರೂ ಅಚ್ಚರಿಯಿಲ್ಲ.
ಪಂದ್ಯ ಗೆದ್ದ ಭಾರತ
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 202 ರನ್ ಬಾರಿಸಿತು. ಬೃಹತ್ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ನೇಪಾಳ ತನ್ನ ಪಾಲಿನ ಆಟದಲ್ಲಿ 9 ವಿಕೆಟ್ನಷ್ಟಕ್ಕೆ 179ರನ್ ಗಳಿಸಿ ಕೇವಲ 23 ರನ್ಗಳಿಂದ ಸೋಲು ಕಂಡಿತು. ಗೆಲುವು ಕಂಡ ಭಾರತ ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಂಡಿತು. ಇನ್ನೊಂದು ಹರ್ಡಲ್ಸ್ ದಾಟಿದರೆ ಪದಕ ಸುತ್ತಿಗೆ ನೆಗೆಯಲಿದೆ.