Site icon Vistara News

Yashasvi Jaiswal: ಅರ್ಧಶತಕದ ಮೂಲಕ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

Yashasvi Jaiswal exults after scoring a half-century

ಫ್ಲೋರಿಡಾ: ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿ ಕೇವಲ 1 ರನ್​ಗೆ ಸೀಮಿತರಾಗಿದ್ದ ಯಶಸ್ವಿ ಜೈಸ್ವಾಲ್(Yashasvi Jaiswal)​ ತಮ್ಮ ದ್ವಿತೀಯ ಪ್ರಯತ್ನದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ(West Indies vs India, 4th T20I) ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಅಜೇಯ ಅರ್ಧಶತಕ ಬಾರಿಸಿ ಭಾರತ ತಂಡದ ಪರ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ನಾಲ್ಕನೇ ಅತಿ ಕಿರಿಯ ಆಟಗಾರ

ಬೃಹತ್​ ಮೊತ್ತದ ಚೇಸಿಂಗ್​ ವೇಳೆ ಆರಂಭದಿಂದಲೂ ಜತೆಗಾರ ಶುಭಮನ್​ ಗಿಲ್(Shubman Gill)​ ಅವರೊಂದಿಗೆ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದಕ್ಕೆ ಉತ್ತಮ ಇನಿಂಗ್ಸ್​ ಕಟ್ಟಿದರು. ಅವರು ಅರ್ಧಶತಕ ಬಾರಿಸುತ್ತಿದ್ದಂತೆ ಈ ಸಾಧನೆ ಮಾಡಿದ ನಾಲ್ಕನೇ ಅತಿ ಕಿರಿಯ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಒಟ್ಟು 51 ಎಸೆತ ಎದುರಿಸಿದ ಜೈಸ್ವಾಲ್​ 11 ಬೌಂಡರಿ ಮತ್ತು 3 ಸಿಕ್ಸರ್​ನೊಂದಿಗೆ ಅಜೇಯ 84 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಸಾಧನೆಗೆ ಪಂದ್ಯಶೇಷ್ಠ ಪ್ರಶಸ್ತಿ ಕೂಡ ಲಭಿಸಿತು.

ರೋಹಿತ್​ ಶರ್ಮ ಮೊದಲಿಗ

ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಸಾಧನೆ ನಾಯಕ ರೋಹಿತ್​ ಶರ್ಮ(Rohit Sharma) ಹೆಸರಿನಲ್ಲಿದೆ. ಅವರು 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20 ವರ್ಷ 143 ದಿನಗಳಲ್ಲಿ ಅಜೇಯ 50 ರನ್​ ಬಾರಿಸಿದ್ದರು. ದ್ವಿತೀಯ ಸ್ಥಾನದಲ್ಲಿ ತಿಲಕ್​ ವರ್ಮಾ(20 ವರ್ಷ 271 ದಿನಗಳು)(Tilak Varma) ಕಾಣಿಸಿಕೊಂಡಿದ್ದಾರೆ. ಅವರು ವಿಂಡೀಸ್​ ಸರಣಿಯ 2ನೇ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದರು. ರಿಷಭ್​ ಪಂತ್(21 ವರ್ಷ 38 ದಿನ)​ ಮೂರನೇ ಸ್ಥಾನ ಪಡೆದಿದ್ದಾರೆ. ಅವರು 2018ರಲ್ಲಿ ವಿಂಡೀಸ್​ ವಿರುದ್ಧ 58 ರನ್​ ಬಾರಿಸಿದ್ದರು. ಜೈಸ್ವಾಲ್​ (21 ವರ್ಷ 227 ದಿನಗಳು) ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ ind vs wi : ವೆಸ್ಟ್​ ಇಂಡೀಸ್ ವಿರುದ್ಧ ಭಾರತ ತಂಡಕ್ಕೆ 9 ವಿಕೆಟ್​ ಭರ್ಜರಿ ವಿಜಯ

ಜತೆಯಾಟದಲ್ಲಿಯೂ ದಾಖಲೆ ಬರೆದ ಗಿಲ್​-ಜೈಸ್ವಾಲ್​

ವಿಂಡೀಸ್​ ಬೌಲರ್​ಗಳ ಬೆವರಿಳಿಸಿದ ಶುಭಮನ್​ ಗಿಲ್​ ಮತ್ತು ಯಶಸ್ವಿ ಜೈಸ್ವಾಲ್​ ಅವರು ತಮ್ಮ ಅಮೋಘ ಜತೆಯಾಟದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮೊದಲ ವಿಕೆಟ್​ಗೆ 165 ರನ್​ಗಳಿಸಿ ರೋಹಿತ್​ ಶರ್ಮ ಮತ್ತು ಕೆ.ಎಲ್ ರಾಹುಲ್​ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಜೋಡಿ 2017ರಲ್ಲಿ ಶ್ರೀಲಂಕಾ ವಿರುದ್ಧ 165 ರನ್​ಗಳ ಜತೆಯಾಟ ನಡೆಸಿತ್ತು. ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್​ ಮತ್ತು ದೀಪಕ್​ ಹೂಡಾ ಜೋಡಿ ಅಗ್ರಸ್ಥಾನ ಪಡೆದಿದೆ. ಈ ಜೋಡಿ ಕಳೆದ ವರ್ಷ(2022) ಐರ್ಲೆಂಡ್​ ವಿರುದ್ಧ 176 ರನ್​ಗಳ ಜತೆಯಾಟ ನನಡೆಸಿತ್ತು.

ಪಂದ್ಯ ಗೆದ್ದ ಭಾರತ

ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ವೆಸ್ಟ್​ ಇಂಡೀಸ್​ ತಂಡ ಶಿಮ್ರಾನ್​ ಹೆಟ್​ಮೇರ್​(61) ಅರ್ಧಶತಕದ ನೆರವಿನಿಂದ 8 ವಿಕೆಟ್​ಗೆ 178 ರನ್​ ಗಳಿಸಿತು, ಬೃಹತ್​ ಮೊತ್ತ ಬೆನ್ನಟ್ಟಿದ ಭಾರತ ಶುಭಮನ್​ ಗಿಲ್​(77) ಮತ್ತು ಜೈಸ್ವಾಲ್​(ಅಜೇಯ 84) ಅವರ ಸೊಗಸಾದ ಇನಿಂಗ್ಸ್​ ನೆರವಿನಿಂದ 17 ಓವರ್​ಗಳಲ್ಲಿ ಕೇವಲ 1 ವಿಕೆಟ್​ಗೆ 179 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಸರಣಿ ನಿರ್ಣಾಯಕ ಪಂದ್ಯ ಇಂದು (ಭಾನುವಾರ) ನಡೆಯಲಿದೆ.

Exit mobile version