ಲಖನೌ : ಸ್ಪಿನ್ ಬೌಲರ್ ಯಜ್ವೇಂದ್ರ ಚಹಲ್ (Yuzvendra Chahal) ಭಾರತ ತಂಡದ ಪರ ಹೊಸ ದಾಖಲೆ ಬರೆದಿದ್ದಾರೆ. ಅವರೀಗ ಟೀಮ್ ಇಂಡಿಯಾ ಪರ ಟಿ20 ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ಗಳ ಸರದಾರ. ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದ ಅವರು ಈ ಸಾಧನೆ ಮಾಡಿದ್ದಾರೆ. ಇಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅವರು ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.
32 ವರ್ಷದ ಮಣಿಕಟ್ಟಿನ ಸ್ಪಿನ್ನರ್ ನ್ಯೂಜಿಲ್ಯಾಂಡ್ ಬ್ಯಾಟರ್ ಫಿನ್ ಅಲೆನ್ ಅವರನ್ನು ಔಟ್ ಮಾಡುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು ವಿಕೆಟ್ಗಳ ಗಳಿಕೆಯನ್ನು 91ಕ್ಕೆ ಏರಿಸಿಕೊಂಡರು. ಈ ಮೂಲಕ 90 ವಿಕೆಟ್ ಕಬಳಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದರು. ಪಂದ್ಯದಲ್ಲಿ ಯಜ್ವೇಂದ್ರ ಚಹಲ್ 2 ಓವರ್ಗಳಲ್ಲಿ ಕೇವಲ ನಾಲ್ಕು ರನ್ ನೀಡಿ 1 ವಿಕೆಟ್ ಪಡೆದರು.
ಇದನ್ನೂ ಓದಿ : Yuzvendra Chahal | ಭಾರತ ಪರ ಹೊಸ ದಾಖಲೆ ಬರೆಯುವ ಹಾದಿಯಲ್ಲಿ ಸ್ಪಿನ್ನರ್ ಯಜ್ವೇಂದ್ರ ಚಹಲ್
ನ್ಯೂಜಿಲ್ಯಾಂಡ್ ವಿರುದ್ಧದ ಈ ಹಣಾಹಣಿಯಲ್ಲಿ ಭಾರತ ತಂಡ 6 ವಿಕೆಟ್ಗಳ ಜಯ ದಾಖಲಿಸಿದೆ. ಕೊನೇ ಒಂದು ಎಸೆತ ಬಾಕಿ ಇರುವಾಗ ವಿಜಯೋತ್ಸವ ಆಚರಿಸಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದ್ದು ಫೆಬ್ರವರಿ 1ರಂದು ಲಖನೌನಲ್ಲಿ ನಡೆಯಲಿರುವ ಮೂರನೇ ಪಂದ್ಯ ಕುತೂಹಲ ಸೃಷ್ಟಿಸಿದೆ.