ಉತ್ತರ ಪ್ರದೇಶ: ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ(icc world cup 2023) ಘಾತಕ ಬೌಲಿಂಗ್ ದಾಳಿ ನಡೆಸಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಮೊಹಮ್ಮದ್ ಶಮಿ(Mohammed Shami) ಅವರ ಸಾಧನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಗೌರವ ನೀಡಿದ್ದಾರೆ. ಶಮಿ ಅವರ ತವರಿನಲ್ಲಿ ಮಿನಿ ಸ್ಟೇಡಿಯಂ ಹಾಗೂ ಜಿಮ್ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದಾರೆ.
ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶಮಿ ಅವರು ಸಂಕಷ್ಟ ಸಮಯದಲ್ಲಿ ತಂಡದ ಕೈ ಹಿಡಿಯುವ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಮೊಹಮ್ಮದ್ ಶಮಿಯ ಸಾಧನೆಯನ್ನು ಮನಗಂಡು ಉತ್ತರಪ್ರದೇಶ ಸರ್ಕಾರ ಶಮಿಯ ತವರಾದ ಅಮ್ರೋಹ ಜಿಲ್ಲೆಯ ಸುಹಾಸ್ಪುರದಲ್ಲಿ ಮಿನಿ ಸ್ಟೇಡಿಯಂ ಹಾಗೂ ಜಿಮ್ ನಿರ್ಮಾಣ ಮಾಡಲು ಮುಂದಾಗಿದೆ.
ಈ ಬಾರಿಯ ಏಕದಿನ ವಿಶ್ವಕಪ್ನ ಆರಂಭಿಕ ಮೂರು ಪಂದ್ಯಗಳಲ್ಲಿ ಆಡುವ ಅವವಾಶ ಸಿಗದಿದ್ದರೂ, ಆ ಬಳಿಕದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದಾರೆ. ಅವರು ಆಡಿದ ಒಂಬತ್ತು ಪಂದ್ಯಗಳಲ್ಲಿ 22 ವಿಕೆಟ್ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅದರಲ್ಲೂ ಕಳೆದ ಸೆಮಿಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ಇದನ್ನೂ ಓದಿ 2003ರ ವಿಶ್ವಕಪ್ಗೂ 2023ಕ್ಕೂ ಇದೆ ಹಲವು ಸಾಮ್ಯತೆ; ಭಾರತ ಕಪ್ ಗೆಲ್ಲುವುದು ನಿಶ್ಚಿತ!
ಸ್ಟಡಿಯಂ ನಿರ್ಮಾಣದ ಬಗ್ಗೆ ಮಾತನಾಡಿದ ಇಲ್ಲಿನ ಜಿಲ್ಲಾಧಿಕಾರಿ ರಾಜೇಶ್ ತ್ಯಾಗಿ, ಶಮಿ ಅವರ ಗ್ರಾಮದಲ್ಲಿ ಮಿನಿ ಸ್ಟೇಡಿಯಂ ನಿರ್ಮಿಸುವ ಬಗ್ಗೆ ನಾವು ಪ್ರಸ್ತಾವನೆ ಕಳುಹಿಸುತ್ತೇವೆ. ಈ ಗ್ರಾಮದಲ್ಲಿ ಸ್ಟಡಿಯಂ ನಿರ್ಮಿಸಲು ಸಾಕಷ್ಟು ಜಾಗವಿದೆ ಎಂದಿದ್ದಾರೆ. ಶುಕ್ರವಾರ ರಾಜೇಶ್ ತ್ಯಾಗಿ ಅವರನ್ನೊಳಗೊಂಡ ಅಧಿಕಾರಿ ವರ್ಗ ಶಮಿ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಜಾಗದ ಪರಿಶೀಲನೆ ನಡೆಸಿದೆ.
ವಿಶ್ವಕಪ್‌ನಲ್ಲಿ ಶಮಿ ಬರೆದ ದಾಖಲೆಗಳು
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಅವರು ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಇದನ್ನೂ ಓದಿ India vs Australia Final: ಫೈನಲ್ ಪಂದ್ಯಕ್ಕೆ ಭಾರತೀಯ ರೈಲ್ವೆಯಿಂದ ವಿಶೇಷ ರೈಲು ಸೇವೆ
ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಎಸೆತದಲ್ಲಿ 50 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 795 ಎಸೆತ
ಮಿಚೆಲ್ ಸ್ಟಾರ್ಕ್ : 941 ಎಸೆತ
ಲಸಿತ್ ಮಲಿಂಗ: 1187 ಎಸೆತ
ಗ್ಲೆನ್ ಮೆಗ್ರಾಥ್ : 1540 ಎಸೆತ
ಟ್ರೆಂಟ್ ಬೋಲ್ಟ್ : 1543 ಎಸೆತ
ಏಕದಿನದಲ್ಲಿ 7 ವಿಕೆಟ್: ಶಮಿ ಏಕೈಕ ಭಾರತೀಯ
ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್ ಒಂದರಲ್ಲಿ 7 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಶಮಿ ಪಾತ್ರರಾಗಿದ್ದಾರೆ. ಅನಿಲ್ ಕುಂಬ್ಳೆ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಸೇರಿದಂತೆ 12 ಮಂದಿ ಇನ್ನಿಂಗ್ಸ್‌ವೊಂದರಲ್ಲಿ 6 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಮೊದಲ ಬೌಲರ್: ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ 3 ಬಾರಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎಂಬ ದಾಖಲೆಯನ್ನು ಮೊಹಮದ್ ಶಮಿ ಬರೆದಿದ್ದಾರೆ. ಭಾರತದ ಪರ ವಿಶ್ವಕಪ್‌ನಲ್ಲಿ 50 ವಿಕೆಟ್ ಪೂರ್ತಿಗೊಳಿಸಿದ ಮೊದಲ ಆಟಗಾರ. ಜಹೀರ್ ಖಾನ್, ಜಾವಗಲ್ ಶ್ರೀನಾಥ್ ತಲಾ 44 ವಿಕೆಟ್ ಕಿತ್ತಿದ್ದರು.