ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ ಯೂಕಿ ಭಾಂಬ್ರಿ (Yuki Bhambri)ಅವರು ಎಟಿಪಿ ವರ್ಲ್ಡ್ ಟೂರ್‌ನಲ್ಲಿ(ATP Tour) ಚೊಚ್ಚಲ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಮಲ್ಲೋರ್ಕಾ ಚಾಂಪಿಯನ್‌ಶಿಪ್(Mallorca Championships) ಫೈನಲ್ನಲ್ಲಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದರು.
ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಭಾಂಬ್ರಿ ಮತ್ತು ಲಾಯ್ಡ್ ಹ್ಯಾರಿಸ್(Bhambri and Lloyd Harris) ಸೇರಿಕೊಂಡು ದಕ್ಷಿಣ ಆಫ್ರಿಕಾದ ಜೋಡಿ ರಾಬಿನ್ ಹಾಸ್ ಮತ್ತು ಫಿಲಿಪ್ ಓಸ್ವಾಲ್ಡ್(Robin Haase and Philipp Oswald) ಅವರನ್ನು 6-3, 6-4 ನೇರ ಸೆಟ್ಗಳಿಂದ ಹಿಮ್ಮೆಟ್ಟಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಭಾಂಬ್ರಿ ಅವರ ಜತೆಗಾರ ಈ ಪ್ರಶಸ್ತಿ ಗೆಲ್ಲುವ ಮೂಲಕ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿಯೂ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾದರು. ಆದರೆ ಭಾಂಬ್ರಿಗೆ ಇದು ಚೊಚ್ಚಲ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ.
“ಇದೊಂದು ಅನಿರೀಕ್ಷಿತ ಗೆಲುವಾಗಿದೆ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದೆವು. ಆದರೆ ಈಗ ಚಾಂಪಿಯನ್ ಆಗಿರುವುದು ಸಂತಸ ತಂದಿದೆ. ಟೂರ್ನಿಯುದ್ದಕ್ಕೂ ಆಡಿದ ಎಲ್ಲ ಪಂದ್ಯವನ್ನು ಆನಂದಿಸಿದ್ದೇನೆ. ಈ ಗೆಲುವು ಮುಂದಿನ ಟೂರ್ನಿಗೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ” ಎಂದು ಗೆಲುವಿನ ಬಳಿಕ 30 ವರ್ಷದ ಯೂಕಿ ಭಾಂಬ್ರಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ Yuki Bhambri | ಸಿಂಗಲ್ಸ್ ವಿಭಾಗದ ಟೆನಿಸ್ಗೆ ವಿದಾಯ ಹೇಳಿದ ಭಾರತದ ಯೂಕಿ ಭಾಂಭ್ರಿ!
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾಂಬ್ರಿ ಮತ್ತು ಹ್ಯಾರಿಸ್ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸ್ಯಾಂಟಿಯಾಗೊ ಗೊನ್ಜಾಲೆಜ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ಜೋಡಿಯನ್ನು ಮಣಿಸಿಸಿದ್ದರು. ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಮಾರ್ಸೆಲ್ ಗ್ರಾನೊಲ್ಲರ್ಸ್ ಮತ್ತು ಹೊರಾಸಿಯೊ ಜೆಬಾಲ್ಲೋಸ್ ಸವಾಲು ಗೆದ್ದಿದ್ದರು.
ಇದೇ ವರ್ಷದ ಮೊದಲ ವಾರದಲ್ಲಿ ಯೂಕಿ ಭಾಂಬ್ರಿ ಅವರು ಸಿಂಗಲ್ಸ್ ಮಾದರಿಗೆ ವಿದಾಯ ಹೇಳಿದ್ದರು. ಗಾಯದ ಸಮಸ್ಯೆ ಮತ್ತು ಡಬಲ್ಸ್ ವಿಭಾದದಲ್ಲಿ ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ಅವರು ಸಿಂಗಲ್ಸ್ ಮಾದರಿಯಿಂದ ಹಿಂದೆ ಸರಿದಿದ್ದರು. ಇದೀಗ ಡಬಲ್ಸ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಮಿನುಗಿದ್ದಾರೆ.