Site icon Vistara News

Yusuf Pathan: ಜಮೀನು ಒತ್ತುವರಿ ಆರೋಪ; ನೂತನ ಸಂಸದ ಯೂಸುಫ್ ಪಠಾಣ್​ಗೆ ನೋಟಿಸ್

Yusuf Pathan

Yusuf Pathan: Cricketer-Turned-MP Yusuf Pathan Gets Notice For Encroachment In Gujarat

ವಡೋದರಾ: ಮೊನೆಯಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬಹರಂಪುರ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌‍ (ಟಿಎಂಸಿ) ಪಕ್ಷದಿಂದ ಸ್ಪರ್ಧಿಸಿ ಸಂಸದರಾದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌(Yusuf Pathan) ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ನಾಗರಿಕರ ಜಮೀನನ್ನು ಒತ್ತುವರಿ ಮಾಡಿದ ಆರೋಪದ ಮೇಲೆ ವಡೋದರಾ ಮುನ್ಸಿಪಲ್‌ ಕಾರ್ಪೊರೇಷನ್‌ (ವಿಎಂಸಿ) ಯೂಸುಫ್‌ ಅವರಿಗೆ ನೋಟಿಸ್‌‍ ಜಾರಿಗೊಳಿಸಿದೆ. ಜೂನ್‌ 6 ರಂದು ಪಠಾಣ್‌ ಅವರಿಗೆ ನೋಟಿಸ್‌‍ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿಯ ಮಾಜಿ ಕಾರ್ಪೊರೇಟರ್‌ ವಿಜಯ್‌ ಪವಾರ್‌ ಅವರು ಯೂಸುಫ್‌ ವಿರುದ್ಧ ಜಮೀನು ಒತ್ತುವರಿ ಆರೋಪ ಮಾಡಿದ್ದರು. 2012ರಲ್ಲಿ ಪಠಾಣ್‌ಗೆ ನಿವೇಶನ ಮಾರಾಟ ಮಾಡುವ ವಿಎಂಸಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದರೂ, ಹೊಸದಾಗಿ ಆಯ್ಕೆಯಾದ ಸಂಸದರು ಕಾಂಪೌಂಡ್‌ ಗೋಡೆ ನಿರ್ಮಿಸಿ ನಿವೇಶನವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಯೂಸುಫ್‌ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಟಿಪಿ 22ರ ಅಡಿಯಲ್ಲಿ ತನದಲ್ಜಾ ಪ್ರದೇಶದಲ್ಲಿನ ಪ್ಲಾಟ್‌ ವಿಎಂಸಿ ಒಡೆತನದ ವಸತಿ ಪ್ಲಾಟ್‌ ಆಗಿದೆ. 2012 ರಲ್ಲಿ ಪಠಾಣ್‌ ಅವರು ವಿಎಂಸಿಯಿಂದ ಈ ನಿವೇಶನವನ್ನು ಕೇಳಿದ್ದರು. ಆ ಸಮಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಅವರ ಮನೆ, ಆ ಪ್ಲಾಟ್‌ನ ಪಕ್ಕದಲ್ಲಿ ಇತ್ತು. ಪಠಾಣ್‌ ಅವರು ನಿವೇಶನವನ್ನು ಒತ್ತುವರಿ ಮಾಡಿಕೊಂಡು ಸುತ್ತಲೂ ಕಾಂಪೌಂಡ್‌ ಗೋಡೆ ನಿರ್ಮಿಸಿದ್ದರು. ಹೀಗಾಗಿ ನಗರಸಭೆಗೆ ತನಿಖೆ ನಡೆಸುವಂತೆ ಕೋರಿದ್ದೇನೆ ಎಂದು ಪವಾರ್‌ ಹೇಳಿದ್ದಾರೆ.

ಅತಿಕ್ರಮಣಕ್ಕಾಗಿ ಅವರಿಗೆ ನೋಟಿಸ್‌‍ ನೀಡಲಾಗಿದೆ ಎಂದು ವಿಎಂಸಿಯ ಸ್ಥಾಯಿ ಸಮಿತಿ ಅಧ್ಯಕ್ಷ ಶೀತಲ್‌ ಮಿಸ್ತ್ರಿ ಹೇಳಿದ್ದಾರೆ. ಇತ್ತೀಚೆಗೆ, ಪಠಾಣ್​ ಕಾಂಪೌಂಡ್‌ ಗೋಡೆಯನ್ನು ನಿರ್ಮಿಸಿದ ಬಗ್ಗೆ ನಮಗೆ ಕೆಲವು ದೂರುಗಳು ಬಂದವು. ಹೀಗಾಗಿ ಜೂನ್‌ 6ರಂದು ಪಠಾಣ್‌ ಅವರಿಗೆ ನೋಟಿಸ್‌‍ ನೀಡಿ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಹೇಳಿದ್ದೆವೆ. ನಾವು ಒಂದೆರಡು ವಾರಗಳ ಕಾಲ ಕಾಯುತ್ತೇವೆ ಮತ್ತು ನಂತರ ನಾವು ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ. ಈ ಭೂಮಿ ವಿಎಂಸಿಗೆ ಸೇರಿದ್ದು, ಅದನ್ನು ವಾಪಸ್‌‍ ಪಡೆಯುತ್ತೇವೆ ಎಂದು ಮಿಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ Election Results 2024: 5 ಬಾರಿಯ ಸಂಸದನ ವಿರುದ್ಧ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ ಯೂಸುಫ್ ಪಠಾಣ್

ಟಿಎಂಸಿ(TMC) ಪಕ್ಷದಿಂದ ಸ್ಪರ್ಧಿಸಿದ್ದ ಯೂಸುಫ್, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ 5 ಬಾರಿಯ ಸಂಸದರಾಗಿದ್ದ ಅಧೀರ್ ರಂಜನ್ ಚೌಧರಿ(Adhir Chowdhury)ಯನ್ನು ಮಣಿಸಿದ್ದರು. ಯೂಸುಫ್ ಪಠಾಣ್ 5,18,066 ಮತಗಳನ್ನು ಪಡೆದರೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ರಂಜನ್ ಚೌಧರಿ 4,32,340 ಮತಗಳನ್ನು ಮಾತ್ರ ಪಡೆದಿದ್ದರು. ಪಠಾಣ್ 85,726 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.

ಮೂಲತಃ ಗುಜರಾತ್‌ನವರಾದ ಯೂಸುಫ್ ಪಠಾಣ್ ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದರು. ಅಲ್ಲದೆ ತಂಡದ ಪ್ರಧಾನ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬಂಗಾಳದಾದ್ಯಂತ ಯೂಸುಫ್​ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೇ ಕಾರಣದಿಂದ ಅವರಿಗೆ ಪಶ್ಚಿಮ ಬಂಗಾಳದಿಂದ ಟಿಎಂಸಿ ಟಿಕೆಟ್​ ನೀಡಲಾಗಿತ್ತು.

Exit mobile version