Site icon Vistara News

Yuvraj Singh: ಯುವರಾಜ್‌ ಸಿಂಗ್​ ಬಿಜೆಪಿ ಸೇರುವುದು ಖಚಿತ; ಈ ಕ್ಷೇತ್ರದಿಂದ ಕಣಕ್ಕೆ?

yuvraj singh

ಪಂಜಾಬ್​: ಮುಂಬರುವ ಲೋಕಸಭೆ ಚುನಾವಣೆಯಲ್ಲಿ(Lok Sabha polls 2024) ಮಾಜಿ ಕ್ರಿಕೆಟರ್‌ ಯುವರಾಜ್‌ ಸಿಂಗ್‌(Yuvraj Singh) ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿದೆ. ಇದೀಗ ಯುವರಾಜ್​ ಸಿಂಗ್​ ಅವರು ಪಂಜಾಬ್​ನ ಬಿಜೆಪಿ(Bharatiya Janata Party) ಅಧ್ಯಕ್ಷ ಸುನೀಲ್​ ಜೊಹಾರ್(Sunil Jakhar)​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್​ನಲ್ಲಿ ಮಂತ್ರಿಯಾಗಿರುವ ಯುವ ಲೀಡರ್​ ಒಬ್ಬರ ಸಂಪರ್ಕದಲ್ಲಿದ್ದಾರೆ ಎಂದು ನ್ಯೂಸ್​ 18 ವರದಿ ಮಾಡಿದೆ. ಹೀಗಾಗಿ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ.

ಇತ್ತೀಚೆಗೆ ಯುವರಾಜ್‌ ಸಿಂಗ್‌ ಅವರನ್ನು ಕೇಂದ್ರ ಭೂ ಸಾರಿಗೆ-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಭೇಟಿಯಾಗಿದ್ದರು. ಹೀಗಾಗಿ, ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿತ್ತು. ಇದೀಗ ಯುವಿ ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ನ್ಯೂಸ್​ 18 ತನ್ನ ವರದಿಯಲ್ಲಿ ತಿಳಿಸಿದೆ. ಯುವರಾಜ್​ ಸಿಂಗ್ ಆತ್ಮೀಯ​ ಗೆಳೆಯನಾಗಿರುವ ಗೌತಮ್​ ಗಂಭೀರ್​​ ಬಿಜೆಪಿ ಪಕ್ಷದ ಸಂಸದರಾಗಿದ್ದರೆ. ಇವರು ಕೂಡ ಯುವರಾಜ್​ ಅವರನ್ನು ಪಕ್ಷಕ್ಕೆ ಸೇರಿಸುವಲ್ಲಿ ಮನವೊಲಿಸುವ ಸಾಧ್ಯತೆಯೂ ಅಧಿಕವಾಗಿದೆ. ಒಟ್ಟಾರೆಯಾಗಿ ಯುವರಾಜ್‌ ರಾಜಕೀಯದಲ್ಲಿ ಇನಿಂಗ್ಸ್​ ಆರಂಭಿಸುವ ಸಾಧ್ಯತೆಯೊಂದು ಕಂಡುಬಂದಿದೆ. 

ಗುರುದಾಸ್​ಪುರದಿಂದ ಸ್ಪರ್ಧೆ?


ಸದ್ಯದ ಮಾಹಿತಿ ಪ್ರಕಾರ ಗುರುದಾಸ್‌ಪುರದಿಂದ (Gurdaspur) ಯುವರಾಜ್​ ಸಿಂಗ್​ಗೆ ಬಿಜೆಪಿ ಟಿಕೆಟ್​ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿದೆ. ಪ್ರಸ್ತುತ ಈ ಕ್ಷೆತ್ರದಲ್ಲಿ ನಟ ಸನ್ನಿ ಡಿಯೋಲ್(Sunny Deol)​ ಬಿಜೆಪಿ ಸಂಸದರಾಗಿದ್ದಾರೆ. ಆದರೆ ಅವರ ವಿರುದ್ಧ ಬಾರಿ ವಿರೋಧಗಳು ವ್ಯಕ್ತವಾಗಿದೆ. ಸನ್ನಿ ಡಿಯೋಲ್​ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ. ಇದುವರೆಗೂ ಅವರು ಒಂದೇ ಒಂದು ಬಾರಿ ಕೂಡ ಈ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಲ್ಲಿದೆ. ಹೀಗಾಗಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್​ ಸಿಗುವುದು ಅನುಮಾನ. ಈ ಸ್ಥಾನಕ್ಕೆ ಯುವರಾಜ್​ ಅವರನ್ನು ಆಯ್ಕೆ ಮಾಡಿ ಟಿಕೆಟ್​ ನೀಡುವುದು ಬಿಜೆಪಿಯ ಮೆಗಾ ಪ್ಲಾನ್​​ ಆಗಿದೆ.

ಇದನ್ನೂ ಓದಿ Yuvraj Singh: ರಾಜಕೀಯದಲ್ಲಿ ಸಿಕ್ಸರ್​ ಬಾರಿಸಲು ಸಜ್ಜಾದ ಯುವರಾಜ್​​; ಬಿಜೆಪಿ ಪರ ಬ್ಯಾಟಿಂಗ್​!

ನವಜೋತ್ ಸಿಂಗ್ ಕೂಡ ಬಿಜೆಪಿ ಸೇರ್ಪಡೆ?


ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಕಾಂಗ್ರೆಸ್ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ ಮೂಲಗಳ ಪ್ರಕಾರ, ಫೆಬ್ರವರಿ 22ರ ನಂತರ ಸಿಧು ಜತೆಗೆ 3 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಬಹುದು ಎಂದು ವರದಿಯಾಗಿದೆ. 2004 ರಲ್ಲಿ ಅಮೃತಸರ ಕ್ಷೇತ್ರದಿಂದ ಸಿಧು ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದರು. ಅವರ ವಿರುದ್ಧ ನ್ಯಾಯಾಲಯದ ಮೊಕದ್ದಮೆಯಿಂದಾಗಿ ಅವರು ರಾಜೀನಾಮೆ ನೀಡಿದ ನಂತರ, ತೀರ್ಪಿಗೆ ತಡೆ ನೀಡಿದ ನಂತರ ಅವರು ಮತ್ತೆ ನಿಂತು ಗೆದ್ದಿದ್ದರು. 2017ರಲ್ಲಿ ಸಿಧು ಕಾಂಗ್ರೆಸ್ ಸೇರಿದ್ದರು. ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಅಮೃತಸರ ಪೂರ್ವದಿಂದ ಸ್ಪರ್ಧಿಸಿ ಗೆದ್ದು ಸಂಪುಟ ದರ್ಜೆ ಸಚಿವರಾಗಿದ್ದರು. ಇದೀಗ ಮತ್ತೆ ಬಿಜೆಪಿ ಸೇರಿ ಅಮೃತಸರ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version