Site icon Vistara News

Yuvraj Singh: ರಾಜಕೀಯದಲ್ಲಿ ಸಿಕ್ಸರ್​ ಬಾರಿಸಲು ಸಜ್ಜಾದ ಯುವರಾಜ್​​; ಬಿಜೆಪಿ ಪರ ಬ್ಯಾಟಿಂಗ್​!

Yuvraj Singh is reportedly likely to join BJP ahead of the Lok Sabha polls

ಬೆಂಗಳೂರು: ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್​ ಗೆಲ್ಲಿಸಿಕೊಡುವಲ್ಲಿ ಕ್ಯಾನ್ಸರ್‌ ಮಹಾಮಾರಿಯನ್ನು ಬದಿಗಿಟ್ಟು ಹೋರಾಡಿದ ಅಸಾಮಾನ್ಯ ಹೋರಾಟಗಾರ ಯುವರಾಜ್‌ ಸಿಂಗ್‌(Yuvraj Singh) ಅವರು ರಾಜಕೀಯದಲ್ಲಿ ಇನಿಂಗ್ಸ್​ ಆರಂಭಿಸುವ ಸಾಧ್ಯತೆಯೊಂದು ಕಂಡುಬಂದಿದೆ. ಬಿಜೆಪಿ ಪಕ್ಷ ಸೇರಿ(Yuvraj Singh to join BJP) ಇದೇ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಕೇಂದ್ರ ಭೂ ಸಾರಿಗೆ-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರು ಯುವರಾಜ್​ ಸಿಂಗ್​ಕುಟುಂಬದವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಸಿಕ್ಸರ್ ಸಿಂಗ್ ಯುವಿ ಬಿಜೆಪಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ನಿತಿನ್‌ ಗಡ್ಕರಿ ಕೂಡ ಟ್ವಿಟರ್​ ಎಕ್ಸ್​ನಲ್ಲಿ ಯುವರಾಜ್​ ಭೇಟಿ ತುಂಬಾನೆ ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಪಂಜಾಬ್​ನ ಗುರುದಾಸ್​ಪುರ ಲೋಕಸಭಾ ಕ್ಷೇತ್ರದಿಂದ ಯುವರಾಜ್ ಸಿಂಗ್ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದ್ದು, ಇದೇ ಕಾರಣದಿಂದಾಗಿ ನಿತಿನ್ ಗಡ್ಕರಿ ಯುವರಾಜ್​ ಸಿಂಗ್​ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಟೀಮ್​ ಇಂಡಿಯಾದ ಯುವರಾಜ್​ ಸಿಂಗ್​ ಸ್ನೇಹಿತರೂ ಆಗಿರುವ ಗೌತಮ್​ ಗಂಭಿರ್​ ಬಿಜೆಪಿ ಪಕ್ಷದ ಸಂಸದರಾಗಿದ್ದರೆ. ಹರ್ಭಜನ್​ ಸಿಂಗ್​ ಅವರು ಆಮ್​ ಆದ್ಮಿ ಪಕ್ಷದ ಸಂಸದರಾಗಿದ್ದಾರೆ. ಇದೀಗ ಯುವರಾಜ್​ ಸಿಂಗ್​ ಅವರು ಕೂಡ ರಾಜಕೀಯಕ್ಕೆ ಎಂಟ್ರಿಕೊಟ್ಟರೂ ಅಚ್ಚರಿಯಿಲ್ಲ.

ಇದನ್ನೂ ಓದಿ Shivam Dube : ವಿರಾಟ್​ ಕೊಹ್ಲಿ, ಯುವರಾಜ್​ ಸಿಂಗ್​ ದಾಖಲೆ ಪಟ್ಟಿ ಸೇರಿದ ಶಿವಂ ದುಬೆ

ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರ ಕ್ರಿಕೆಟ್‌ ಪ್ರತಿಭೆ ಮೊದಲು ಅನಾವರಣಗೊಂಡದ್ದು 2000ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ. ಶ್ರೀಲಂಕಾದಲ್ಲಿ ನಡೆದ ಈ ಕೂಟದಲ್ಲಿ ಯುವಿ 33.83ರ ಸರಾಸರಿಯಲ್ಲಿ 203 ರನ್‌ ಬಾರಿಸಿದರು. ಎಡಗೈ ಸ್ಪಿನ್‌ ಬೌಲಿಂಗ್‌ ಮೂಲಕವೂ ಗಮನ ಸೆಳೆದರು. ಮರು ವರ್ಷವೇ ಟೀಮ್‌ ಇಂಡಿಯಾಕ್ಕೆ ಲಗ್ಗೆ ಹಾಕಿದರು. 2000ದ ಋತು ಕ್ರಿಕೆಟ್‌ ಪಾಲಿಗೆ ಅಸಹನೀಯವಾಗಿತ್ತು. ಆಗ ಮ್ಯಾಚ್‌ ಫಿಕ್ಸಿಂಗ್‌ ಭೂತ ಭಾರತದ ಹೆಗಲನ್ನೂ ಏರಿತ್ತು. ಸೌರವ್‌ ಗಂಗೂಲಿ ಪಡೆ ಇದನ್ನೆಲ್ಲ ತೊಡೆದು ಹಾಕಿ ಆಸ್ಟ್ರೇಲಿಯ ವಿರುದ್ಧ ಐಸಿಸಿ ನಾಕೌಟ್‌ ಪಂದ್ಯವನ್ನಾಡುತ್ತಿತ್ತು. 12ನೇ ನಂಬರ್‌ ಜೆರ್ಸಿ ಧರಿಸಿದ ಯುವರಾಜ್‌ಗೆ ಇದು ಕೇವಲ 2ನೇ ಪಂದ್ಯವಾಗಿತ್ತು. ಘಟಾನುಘಟಿ ಬೌಲರ್‌ಗಳ ಎದುರು 80 ಎಸೆತಗಳಲ್ಲಿ 84 ರನ್‌ ಬಾರಿಸಿ ಅಬ್ಬರಿಸಿದ್ದರು.

ವಿಶ್ವಕಪ್‌ ಬರಗಾಲವನ್ನು ನೀಗಿಸಿದ್ದ ಯುವಿ


ಭಾರತದ ಸುದೀರ್ಘ‌ ವಿಶ್ವಕಪ್‌ ಬರಗಾಲವನ್ನು ನೀಗಿಸಿದ್ದು 2011ರ ಪಂದ್ಯಾವಳಿ(2011 World Cup). ಇದು ಯುವರಾಜ್‌ ಪಾಲಿಗೆ ಹೆಚ್ಚು ಸ್ಮರಣೀಯ. ಒಂದು ಶತಕ, 4 ಅರ್ಧ ಶತಕ, 15 ವಿಕೆಟ್‌, 4 ಪಂದ್ಯಶ್ರೇಷ್ಠ ಪ್ರಶಸ್ತಿ, ಕೊನೆಗೆ ಸರಣಿಶ್ರೇಷ್ಠ ಸಮ್ಮಾನ! ವಿಶ್ವಕಪ್‌ ಕೂಟವೊಂದರಲ್ಲಿ 300 ಪ್ಲಸ್‌ ರನ್‌ ಜತೆಗೆ 15 ವಿಕೆಟ್‌ ಸಂಪಾದಿಸಿದ ಮೊದಲ ಆಲ್‌ರೌಂಡರ್‌ ಎಂಬ ಗರಿಮೆ. ಯುವರಾಜ್‌ ಸಿಂಗ್‌ ನೈಜ ವರ್ಲ್ಡ್ ಚಾಂಪಿಯನ್‌ ಆಗಿ ಮೆರೆದಿದ್ದರು

ಕ್ಯಾನ್ಸರ್​ ಮಧ್ಯೆಯೂ ಹೋರಾಡಿದ್ದ ಯುವಿ


ಏಕದಿನ ವಿಶ್ವಕಪ್​ ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ ಯುವರಾಜ್​ ಸಿಂಗ್​ ತಮ್ಮ ಕ್ಯಾನ್ಸರ್​ ಕಾಯಿಲೆಯನ್ನು ಮರೆಮಾಚಿ ದೇಶಕ್ಕಾಗಿ ಹೋರಾಟ ನಡೆಸಿದ್ದರು. ಮೈದಾನದಲ್ಲೇ ಹಲವು ಬಾರಿ ರಕ್ತ ಕಾರಿದರೂ ಛಲ ಬಿಡದೆ ಆಟವಾಡಿದ್ದರು. ಫೈನಲ್‌ ಪಂದ್ಯದ ಹಿಂದಿನ ದಿನ ಅವರು ರಕ್ತ ಕಾರಿದ್ದರು. ಅವರ ಅಸಾಮಾನ್ಯ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಒಂದು ಶತಕ, ನಾಲ್ಕು ಅರ್ಧಶತಕ ಸೇರಿ ಒಟ್ಟು 362 ರನ್​ ಬಾರಿಸಿದ್ದರು. ಬೌಲಿಂಗ್​ನಲ್ಲಿಯೂ ಮಿಂಚಿ 15 ವಿಕೆಟ್​ ಕೆಡವಿದ್ದರು.

Exit mobile version