Site icon Vistara News

ICC World Cup 2023 : ಝಾಕಾ ಅಶ್ರಫ್​ ಯೂ ಟರ್ನ್​, ಭಾರತ ವೈರಿ ರಾಷ್ಟ್ರವಲ್ಲ, ಪ್ರತಿಸ್ಪರ್ಧಿ ಎಂದು ಸಮಜಾಯಿಷಿ

zaka Ashraf

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಝಾಕಾ ಅಶ್ರಫ್ ಅವರು ಹೈದರಾಬಾದ್​ನಲ್ಲಿ ಪಾಕಿಸ್ತಾನ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ ಭಾರತವನ್ನು ಶ್ಲಾಘಿಸಿದ್ದಾರೆ. ಈ ಮೂಲಕ ತಮ್ಮ ವಿವಾದಾತ್ಮಕ ಹೇಳಿಕೆಗೆ ತೇಪೆ ಹಚ್ಚಲು ಆರಂಭಿಸಿದ್ದಾರೆ. ಐಸಿಸಿ ವಿಶ್ವಕಪ್ 2023 ರಲ್ಲಿ (ICC World Cup 2023) ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡವು ಕಳೆದ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದೆ. ಆ ತಂಡಕ್ಕೂ ಭರ್ಜರಿ ಸ್ವಾಗತ ದೊರಕಿದೆ. ಅದರ ಹೊರತಾಗಿಯೂ ಭಾರತವನ್ನು ಶತ್ರು ನೆಲ ಎಂದು ಹೇಳುವ ಮೂಲಕ ಝಾಕಾ ವಿವಾದ ಸೃಷ್ಟಸಿದ್ದರು. ಅದಕ್ಕೀಗ ತೇಪೆ ಹಚ್ಚುತ್ತಿದ್ದಾರೆ. ಅಲ್ಲದೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಮೂಲಕ ಹೇಳಿಕೆಯನ್ನು ನೀಡಿದ್ದಾರೆ.

ಲಾಹೋರ್​​ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಝಾಕಾ ಅಶ್ರಫ್ ಭಾರತವನ್ನು ಶತ್ರು ರಾಷ್ಟ್ರ ಎಂದು ಉಲ್ಲೇಖಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಇಂತಹ ಹೇಳಿಕೆಗಳಿಗಾಗಿ ಅವರು ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಶುಕ್ರವಾರ ರಾತ್ರಿ ಪಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು ತಮ್ಮ ಹೇಳಿಕೆಗಳು ತಪ್ಪು ಗ್ರಹಿಕೆ ಎಂದಿದ್ದಾರೆ. ಭಾರತ ಕೇವಲ ಪ್ರತಿಸ್ಪರ್ಧಿ ಎಂಬುದಾಗಿ ಹೇಳಿದ್ದಾರೆ.

ಝಾಕಾ ಯೂ ಟರ್ನ್​

ಈ ತಿಂಗಳ ಆರಂಭದಲ್ಲಿ ಏಷ್ಯಾ ಕಪ್ 2023 ಪಂದ್ಯವನ್ನು ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್ ಮೈದಾನದಲ್ಲಿ ಸಂಬಂಧವನ್ನು ಸುಧಾರಿಸುವ ಕೆಲಸ ಮಾಡುತ್ತಿವೆ. ಆದರೆ ಜಾಕಾ ಅವರ ಇತ್ತೀಚಿನ ಹೇಳಿಕೆಗಳು ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿವೆ. ವ್ಯತಿರಿಕ್ತ ಕಾಮೆಂಟ್​ಗಳ ಕಾರಣಕ್ಕೆ ವಿಭಿನ್ನ ಮನಸ್ಥಿತಿಗಳನ್ನು ತೋರಿಸುತ್ತಿದ್ದಾರೆ ಎಂದು ಅನೇಕರು ಆರೋಪಿಸಿದರು. ಆದರೆ ಪಾಕಿಸ್ತಾನ ತಂಡವು ಭಾರತದಲ್ಲಿ ಪಡೆಯುತ್ತಿರುವ ಆತಿಥ್ಯವನ್ನು ನೋಡಿದ ನಂತರ, ಭಾರತ ಮತ್ತು ಪಾಕಿಸ್ತಾನ ಎರಡೂ ಶತ್ರುಗಳಲ್ಲ ಆದರೆ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳು ಎಂದು ಅಶ್ರಫ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಭಾರತದಲ್ಲಿ ಪಾಕಿಸ್ತಾನ ತಂಡದ ಪಡೆದ ಅದ್ಭುತ ಸ್ವಾಗತವನ್ನು ಉಲ್ಲೇಖಿಸಿದ ಅಶ್ರಫ್, ಇದು ಎರಡೂ ಕಡೆಯ ಅಭಿಮಾನಿಗಳು ಆಟಗಾರರ ಬಗ್ಗೆ ಹೊಂದಿರುವ ಆಳವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ICC World Cup 2023 : ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದು

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ಪಡಿಸಲಾದ ಸ್ವಾಗತ ಪ್ರೀತಿ ಸಂದೇಶವಾಗಿದೆ. ಈ ರೀತಿಯ ಸ್ವಾಗತವನ್ನು ಏರ್ಪಡಿಸಿದ್ದಕ್ಕಾಗಿ ಝಾಕಾ ಅಶ್ರಫ್ ವೈಯಕ್ತಿಕವಾಗಿ ಭಾರತೀಯರನ್ನು ಅಭಿನಂದಿಸಿದರು. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅವರು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿ ಹೊರಹೊಮ್ಮುತ್ತಾರೆ. ಆದರೆ ಶತ್ರುಗಳಾಗಿ ಅಲ್ಲ ಎಂದು ಝಾಕಾ ಉಲ್ಲೇಖಿಸಿದ್ದಾರೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ಕ್ರಿಕೆಟ್ ಯಾವಾಗಲೂ ಜಾಗತಿಕ ಗಮನದ ಕೇಂದ್ರವಾಗಿದೆ. ಅದಕ್ಕಾಗಿಯೇ ಉಭಯ ದೇಶಗಳ ನಡುವಿನ ಕ್ರಿಕೆಟ್ ಅನ್ನು ಈ ಕ್ರೀಡೆಯಲ್ಲಿ ಇತರ ಸ್ಪರ್ಧೆಗಳಿಗಿಂತ ಹೆಚ್ಚು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ ಎಂದು ನಿರ್ವಹಣಾ ಸಮಿತಿಯ ಅಧ್ಯಕ್ಷರು ಒತ್ತಿ ಹೇಳಿದರು.

Exit mobile version