ದೋಹಾ : ಕತಾರ್‌ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವ ಕಪ್ (FIFA WORLD CUP) ಆಟಕ್ಕಿಂತ ಜಾಸ್ತಿ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಇಸ್ಲಾಮಿಕ್ ರಾಷ್ಟ್ರದಲ್ಲಿ ಹಾಕಲಾಗಿರುವ ಹಲವಾರು ನಿರ್ಬಂಧಗಳು ಕ್ರೀಡಾ ಪ್ರೇಮಿಗಳಿ ನಿರಾಸೆಗೆ ಮೂಲಕ ಕಾರಣವಾದರೆ, ಇದೀಗ ಕ್ರೀಡಾಕೂಟಕ್ಕೆ ಧಾರ್ಮಿಕ ಲೇಪನ ಬಳಿಯಲು ಯತ್ನಿಸುತ್ತಿದೆ. ಆಯೋಜಕರ ಈ ಧೋರಣೆಗಳ ಬಗ್ಗೆ ಜಾಗತಿಕವಾಗಿ ವಿರೋಧಗಳು ವ್ಯಕ್ತಗೊಂಡಿವೆ. ಏತನ್ಮಧ್ಯೆ, ಭಾರತೀಯ ಮೂಲದ ವಿವಾದಿತ ಇಸ್ಲಾಮಿಕ್ ಧರ್ಮಗುರು ಜಾಕಿರ್ ನಾಯ್ಕ್ ಅವರನ್ನು ಕ್ರೀಡಾಕೂಟಕ್ಕೆ ಕರೆಸಿಕೊಳ್ಳುವ ಜತೆಗೆ ಅವರಿಂದ ಇಸ್ಲಾಮಿಕ್ ಮತಪ್ರವಚನ ಕೂಡ ಆಯೋಜಿಸಲಾಗಿದೆ.
ಕತಾರಿ ಟಿವಿ ಪತ್ರಕರ್ತರೊಬ್ಬರು ಜಾಕಿರ್ ನಾಯ್ಕ್ ವಿಶ್ವ ಕಪ್ ನಡೆಯುತ್ತಿರುವ ದೋಹಾಗೆ ಭೇಟಿ ನೀಡಿರುವ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲೇ ಉಳಿಯುವ ಅವರು ಹಲವಾರು ಉಪನ್ಯಾಸಗಳನ್ನು ನೀಡಲಿದ್ದಾರೆ ಎಂಬುದಾಗಿಯೂ ಅವರು ಹೇಳಿದ್ದಾರೆ. ಈ ವಿಚಾರಕ್ಕೂ ವಿಶ್ವ ಮಟ್ಟದಲ್ಲಿ ಪ್ರತಿರೋಧಗಳು ವ್ಯಕ್ತಗೊಂಡಿವೆ. ಜಾಗತಿಕ ಮಟ್ಟದ ಕ್ರೀಡಾಕೂಟಕ್ಕೆ ಧಾರ್ಮಿಕ ಬಣ್ಣ ನೀಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಲಾಗಿದೆ.
ಜಾಕಿರ್ ನಾಯ್ಕ್ ಭಾರತದಲ್ಲಿ ದ್ವೇಷ ಭಾಷಣ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ನಿಷೇಧಕ್ಕೆ ಒಳಗಾಗಿದ್ದಾರೆ. ಹೀಗಾಗಿ ೨೦೧೭ರಿಂದ ಮಲೇಷ್ಯಾದಲ್ಲಿ ನೆಲೆಯೂರಿದ್ದಾರೆ. ಆದಾಗ್ಯೂ ಸಾಮಾಜಿಕ ಜಾಲತಾಣಗಳ ಮೂಲಕ ಭಾಷಣಗಳನ್ನು ಪ್ರಕಟಿಸುತ್ತಾ ತಮ್ಮ ಅನುಯಾಯಿಗಳನ್ನು ತಲುಪುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | FIFA WORLD CUP | ವಿ ವಾಂಟ್ ಬಿಯರ್, ಕತಾರ್‌ನಲ್ಲಿ ಗುಂಡು ಪ್ರಿಯರ ಒಕ್ಕೊರಲ ಕೂಗು!