ವಿವಾದಿತ ಮುಸ್ಲಿಂ ಧರ್ಮಗುರು, ಮೂಲಭೂತವಾದಿ ಜಾಕೀರ್ ನಾಯ್ಕ್ ಕತಾರ್ನಲ್ಲಿ ನವೆಂಬರ್ 20ರಂದು ನಡೆದ ಫುಟ್ಬಾಲ್ ವಿಶ್ವಕಪ್ (FIFA World Cup) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಡಿಯೊವೊಂದನ್ನು ಕತಾರ್ನ ಟಿವಿ ಪತ್ರಕರ್ತರೊಬ್ಬರು ಶೇರ್ ಮಾಡಿಕೊಂಡಿದ್ದರು. 2016ರಿಂದಲೂ ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಜಾಕಿರ್ ನಾಯ್ಕ್ನನ್ನು ಕತಾರ್ ಫಿಫಾ ವರ್ಲ್ಡ್ಕಪ್ನಲ್ಲಿ ನೋಡುತ್ತಿದ್ದಂತೆ ಭಾರತ ಸರ್ಕಾರ ತೀವ್ರ ಬೇಸರ ಹೊರಹಾಕಿತ್ತು. ಅಷ್ಟೇ ಅಲ್ಲ, ಭಾರತದಲ್ಲಿ ‘ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸಿ’ ಎಂಬ ಅಭಿಯಾನವೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿತ್ತು.
ಇದೆಲ್ಲದರ ಮಧ್ಯೆ ಕತಾರ್ ಆಡಳಿತ ಈಗ ಸ್ಪಷ್ಟನೆ ನೀಡಿದೆ. ‘ಫಿಫಾ ವರ್ಲ್ಡ್ಕಪ್ ಉದ್ಘಾಟನಾ ಸಮಾರಂಭಕ್ಕೆ ನಾವು ಜಾಕೀರ್ ನಾಯ್ಕ್ನನ್ನು ಆಹ್ವಾನಿಸಿರಲಿಲ್ಲ’ ಎಂದು ಭಾರತಕ್ಕೆ ತಿಳಿಸಿದೆ. ಅಷ್ಟೇ ಅಲ್ಲ, ‘ಕತಾರ್-ಭಾರತದ ದ್ವಿಪಕ್ಷೀಯ ಸಂಬಂಧವನ್ನು ಹಾಳುಗೆಡವಲು ಯಾವುದೋ ಅನ್ಯದೇಶಗಳು ಮಾಡಿದ ಕುತಂತ್ರ ಇದು. ಬೇಕೆಂತಲೇ ತಪ್ಪು ಮಾಹಿತಿಗಳನ್ನು ಹಬ್ಬಿಸಲಾಗುತ್ತಿದೆ’ ಎಂದೂ ಹೇಳಿದೆ. ಕತಾರ್ ಈ ಬಗ್ಗೆ ಭಾರತಕ್ಕೆ ರಾಜತಾಂತ್ರಿಕ ಸಂದೇಶವನ್ನು ನೀಡಿದೆ. ಜಾಕೀರ್ ನಾಯ್ಕ್ ಬಹುಶಃ ಖಾಸಗಿಯಾಗಿ ಫಿಫಾ ವರ್ಲ್ಡ್ಕಪ್ಗೆ ಭೇಟಿ ಕೊಟ್ಟಿದ್ದಿರಬಹುದು’ ಎಂದೂ ಹೇಳಿಕೊಂಡಿದೆ.
ಜಾಕಿರ್ ನಾಯ್ಕ್ ಒಬ್ಬ ಮುಸ್ಲಿಂ ಮೂಲಭೂತವಾದಿ. ಉಗ್ರಕೃತ್ಯಗಳಿಗೆ ನೆರವು ನೀಡುವ, ದ್ವೇಷ ಭಾಷಣದ ಆರೋಪ ಹೊತ್ತಿದ್ದಾನೆ. ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗುತ್ತಿದ್ದಂತೆ ಆತ ಮಲೇಷ್ಯಾಕ್ಕೆ ಹೋಗಿ ನೆಲೆಸಿದ್ದಾನೆ. ಅಲ್ಲಿದ್ದರೂ ಆತ ತನ್ನ ಪ್ರವಚನ, ಭಾಷಣವನ್ನು ವಿಡಿಯೊ ಮಾಡಿ, ಭಾರತ ಮುಸ್ಲಿಮರಿಗೂ ಕಳಿಸುತ್ತಾನೆ ಎಂಬ ಮಾಹಿತಿ ಇದೆ. ಈತ ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್ಎಫ್) ಒಂದು ಕಾನೂನು ಬಾಹಿರ ಸಂಘಟನೆ ಎಂದು ಇದೇ ವರ್ಷ ಮಾರ್ಚ್ನಲ್ಲಿ ಕೇಂದ್ರ ಗೃಹ ಇಲಾಖೆ ಘೋಷಿಸಿದೆ. ಅಲ್ಲದೆ, ಕಾನೂನುಬಾಹಿರ ಚಟುವಟಿಕೆ ನಿಯಂತ್ರ ಕಾಯ್ದೆ (UAPA)ಯಡಿ ಪ್ರಕರಣವನ್ನೂ ದಾಖಲಿಸಿದೆ. ಜಾಕೀರ್ನ್ನು ಗಡೀಪಾರು ಮಾಡುವಂತೆ ಮಲೇಷ್ಯಾಕ್ಕೆ ಕೇಳಿದೆ. ಜಾಕೀರ್ ವಿರುದ್ಧ ಈಗಾಗಲೇ ಭಾರತ ರೆಡ್ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಈತ ಬ್ರಿಟನ್ ಮತ್ತು ಕೆನಡಾವನ್ನು ಪ್ರವೇಶ ಮಾಡುವಂತಿಲ್ಲ.
ಇದನ್ನೂ ಓದಿ: FIFA World Cup | ಜಾಕಿರ್ ನಾಯ್ಕ್‌ಗೆ ಆಹ್ವಾನ, ಭಾರತದಲ್ಲಿ ಬಾಯ್ಕಾಟ್ ವಿಶ್ವ ಕಪ್ ಟ್ರೆಂಡಿಂಗ್