ಮುಂಬಯಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಜೀವಾ ಸಿಂಗ್ಗೆ(Ziva Dhoni) ಫಿಫಾ ಚಾಂಪಿಯನ್ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಉಡುಗೊರೆಯೊಂದನ್ನು ನೀಡಿದ್ದಾರೆ.
ಮೆಸ್ಸಿ ತಾವು ಕತಾರ್ ಫಿಫಾ ವಿಶ್ವ ಕಪ್ ವೇಳೆ ಧರಿಸಿದ ಅರ್ಜೆಂಟೀನಾ ಜೆರ್ಸಿಗೆ “ಪಾರಾ ಜೀವಾ” ಎಂದು ಬರೆದು ಸಹಿ ಹಾಕಿ ಗಿಫ್ಟ್ ನೀಡಿದ್ದಾರೆ. ಇದೀಗ ಮೆಸ್ಸಿಯ ಈ ಉಡುಗೊರೆಯ ಜೆರ್ಸಿಯನ್ನು ಹಾಕಿದ ಫೋಟೊವನ್ನು ಜೀವಾ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ “ತಂದೆಯಂತೆ ಮಗಳು” ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಫೋಟೊವನ್ನು ಕಂಡ ಧೋನಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಧೋನಿಯಂತೆ ಮಗಳಿಗೂ ಫುಟ್ಬಾಲ್ ಎಂದರೆ ಬಲು ಅಚ್ಚುಮೆಚ್ಚು. ಅದರಲ್ಲೂ ಅರ್ಜೆಂಟೀನಾ ತಂಡದ ಲಿಯೋನೆಲ್ ಮೆಸ್ಸಿ ಎಂದರೆ ಅಪಾರ ಪ್ರೀತಿ. ಮೆಸ್ಸಿಯ ಅಪ್ಪಟ ಅಭಿಮಾನಿಯಾದ ಜೀವಾ ಸಿಂಗ್ಗೆ ಇದೀಗ ಅತ್ಯಮೂಲ್ಯ ಉಡುಗೊರೆ ಸಿಕ್ಕಿದ್ದು ಇನ್ನಿಲ್ಲದ ಖುಷಿ ನೀಡಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕತಾರ್ ಫಿಫಾ ಫುಟ್ಬಾಲ್ ವಿಶ್ವ ಕಪ್ ನೋಡಲು ಧೋನಿ ಕತಾರ್‌ಗೆ ತೆರಳಿದ್ದರು. ಈ ವೇಳೆ ಮೆಸ್ಸಿಯಿಂದ ಜೀವಾ ಈ ವಿಶೇಷ ಉಡುಗೊರೆ ಪಡೆದಿದ್ದಾರೆ.
ಇದನ್ನೂ ಓದಿ | Fifa World Cup | ಅರ್ಜೆಂಟೀನಾದ ಕರೆನ್ಸಿಯಲ್ಲಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯ ಫೋಟೊ!