ನವ ದೆಹಲಿ: ಭಾರತ ವಿರೋಧಿ ವಿಷಯಗಳನ್ನು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ವಿಚಾರಗಳನ್ನು ಬಿತ್ತರಿಸುವ/ಪ್ರಕಟಿಸುವ ಯೂಟ್ಯೂಬ್ ಚಾನೆಲ್ಗಳು, ವೆಬ್ಸೈಟ್ಗಳ ವಿರುದ್ಧ ಕೇಂದ್ರ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಂಥವುಗಳ ಮೇಲೆ ಮುಲಾಜಿಲ್ಲದೆ ನಿಷೇಧ ಹೇರುತ್ತಿದೆ. 2021ರಿಂದ ಇಲ್ಲಿಯವರೆಗೆ ವೆಬ್ಸೈಟ್, ಯೂಟ್ಯೂಬ್ ಸೇರಿ 150 ಸುದ್ದಿ ಚಾನೆಲ್ಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ (I&B) ನಿಷೇಧ ಮಾಡಿದೆ (YouTube Channel Banned) ಎಂದು ವರದಿಯಾಗಿದೆ. ಈ ವಿಷಯವನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯ, ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದ್ದರು.
ಕೇಂದ್ರ ಸರ್ಕಾರ ಈವರೆಗೆ ನಿಷೇಧಿಸಿದ ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್ಗಳು ಅಪಾರ ಪ್ರಮಾಣದ ಚಂದಾದಾರರನ್ನು ಹೊಂದಿರುವಂಥವೇ ಆಗಿದ್ದವು. 12,123,500ಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದ, ಸಾಮಾನ್ಯವಾಗಿ 1,320,426,964ಕ್ಕೂ ಹೆಚ್ಚು ವೀಕ್ಷಣೆ ಪಡೆಯುತ್ತಿದ್ದ ಯೂಟ್ಯೂಬ್ ಚಾನೆಲ್ಗಳನ್ನೆಲ್ಲ ಬ್ಯಾನ್ ಮಾಡಲಾಗದೆ. ಹೀಗೆ ನಿಷೇಧಗೊಂಡ ಯೂಟ್ಯೂಬ್ ಚಾನೆಲ್ಗಳಲ್ಲಿ, ’Khabar with Facts, Khabar Taiz, Information Hub, Flash Now, Mera Pakistan, Hakikat Ki Duniya and Apni Dunya TV’ ಗಳೂ ಹೌದು.
ಭಾರತದ ಭದ್ರತೆ, ಆಡಳಿತ, ವಿದೇಶಾಂಗ ವ್ಯವಹಾರ, ಧಾರ್ಮಿಕ ವಿಷಯಗಳು- ಹೀಗೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ತಪ್ಪು ಮಾಹಿತಿ ನೀಡುವುದಲ್ಲದೆ, ಕೋಮುಗಲಭೆ, ಸಂಘರ್ಷಕ್ಕೆ ಕಾರಣವಾಗುತ್ತಿದ್ದ ಎಲ್ಲ ಯೂಟ್ಯೂಬ್ ಚಾನೆಲ್ಗಳು, ವೆಬ್ಸೈಟ್ಗಳ ವಿರುದ್ಧ ಕೇಂದ್ರ ಸರ್ಕಾರವು, 2021ರ ಐಟಿ ನಿಯಮ (ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ)ಯಡಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.
ಇದನ್ನೂ ಓದಿ: ಪಂಜಾಬ್ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ಮಾಡಿದ್ದ 6 ಮಂದಿ ಬಂಧನ; ಯೂಟ್ಯೂಬ್ ನೋಡಿ ದಾಳಿ ಮಾಡುವುದನ್ನು ಕಲಿತಿದ್ದರು!
ಕಳೆದ ವರ್ಷ ಜುಲೈ ತಿಂಗಳಲ್ಲಿ ಈ ಬಗ್ಗೆ ಸಂಸತ್ನಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ‘2021 ಮತ್ತು 2022ರ ಮಧ್ಯೆ ಕೇಂದ್ರ ಸರ್ಕಾರವು 78ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ. ಹಾಗೇ, 560 ಯೂಟ್ಯೂಬ್ ಲಿಂಕ್ಗಳನ್ನು ಬ್ಲಾಕ್ ಮಾಡಿದೆ. ದೇಶ ವಿರೋಧಿ, ತಪ್ಪು ಮಾಹಿತಿಗಳನ್ನು ಹೊಂದಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ದಾರಿ ತಪ್ಪಿಸುವ ಅಂಶಗಳು ಕಂಡುಬಂದರೆ, ದೇಶ ವಿರೋಧಿ ವಿಷಯಗಳು ಬಿತ್ತರಿಸಲ್ಪಟ್ಟರೆ ಅಂಥ ಅಕೌಂಟ್ಗಳನ್ನು ನಿಷ್ಕ್ರಿಯಗೊಳಿಸುತ್ತೇವೆ ಎಂದಿದ್ದರು. ಅದರಂತೆ ಭಾರತ ವಿರೋಧಿ ವಿಷಯಗಳನ್ನು ತೋರಿಸುವ ಯೂಟ್ಯೂಬ್ ಚಾನೆಲ್/ವೆಬ್ಸೈಟ್/ಫೇಸ್ಬುಕ್ ಅಕೌಂಟ್ಗಳ ವಿರುದ್ಧ ಕೇಂದ್ರದ ಸಮರ ಮುಂದುವರಿದಿದೆ.